ADVERTISEMENT

ದೊಡ್ಡಬನಹಳ್ಳಿ: ದಲಿತ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 20:43 IST
Last Updated 17 ಡಿಸೆಂಬರ್ 2020, 20:43 IST
ನಾಮಪತ್ರ ತಿರಸ್ಕೃತ ಗೊಂಡ ಅಭ್ಯರ್ಥಿಗಳು ಹಾಗೂ ಸಂಭಂದಿಕರು ದೊಡ್ಡಬನಹಳ್ಳಿ ಗ್ರಾಮ ಪಂಚಾಯತಿ ಮುಂದೆ ಬದಲಾದ ಮತದಾರ ಪಟ್ಟಿಗಳನ್ನು ಪ್ರದರ್ಶಿಸುತ್ತಿರುವುದು
ನಾಮಪತ್ರ ತಿರಸ್ಕೃತ ಗೊಂಡ ಅಭ್ಯರ್ಥಿಗಳು ಹಾಗೂ ಸಂಭಂದಿಕರು ದೊಡ್ಡಬನಹಳ್ಳಿ ಗ್ರಾಮ ಪಂಚಾಯತಿ ಮುಂದೆ ಬದಲಾದ ಮತದಾರ ಪಟ್ಟಿಗಳನ್ನು ಪ್ರದರ್ಶಿಸುತ್ತಿರುವುದು   

ವೈಟ್‌ಫೀಲ್ಡ್‌: ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಸ್ಪರ್ಧೆ ಬಯಸಿದ್ದ ದಲಿತ ಅಭ್ಯರ್ಥಿಗಳು ದೂರಿದ್ದಾರೆ.

ದೊಡ್ಡಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬನಹಳ್ಳಿ ಕಾಲೊನಿಯ ವಸಂತಾ, ಪೆರುಮಾಳಪ್ಪ, ಮುನಿರಾಜು ಹಾಗೂ ಸಜೀಲಾ ನಾಮಪತ್ರ ಸಲ್ಲಿಸಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ಧಪಡಿಸಲಾಗಿದ್ದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದ ಕ್ರಮ ಸಂಖ್ಯೆಯನ್ನು ನಾಮಪತ್ರ ಸಲ್ಲಿಕೆ ವೇಳೆ ನಮೂದಿಸಿದ್ದರು. ಆದರೆ, ಅಧಿಕಾರಿಗಳು ಹೊಸ ಮತದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ನಾಮಪತ್ರ ಪರಿಶೀಲಿಸಿದ್ದಾರೆ. ಇದರಿಂದ ಅಭ್ಯರ್ಥಿಗಳು ನಮೂದಿಸಿದ್ದ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ.

‘ನಾವು ತಪ್ಪು ಮಾಹಿತಿ ನೀಡಿದ್ದೇವೆ ಎಂದು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಮ್ಮ ನಾಮಪತ್ರ ತಿರಸ್ಕರಿಸಿದ್ದಾರೆ. ಇದು ಅನ್ಯಾಯ’ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ADVERTISEMENT

‘ಚುನಾವಣಾ ಅಧಿಕಾರಿಗಳು ನಮ್ಮ ನಾಮಪತ್ರವನ್ನು ಅಂಗೀಕರಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ಮಾಡುವುದಲ್ಲದೆ, ತಾಲ್ಲೂಕು ಕಚೇರಿಗೂ ಮುತ್ತಿಗೆ ಹಾಕುತ್ತೇವೆ. ಅಲ್ಲದೆ, ನಮ್ಮ ಗ್ರಾಮದಿಂದ ಯಾರೊಬ್ಬರೂ ಈ ಚುನಾವಣೆಯಲ್ಲಿ ಮತ ಚಲಾಯಿಸಲು ಬರುವುದಿಲ್ಲ’ ಎಂದೂ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ ಪರ ಶರತ್‌ ಕೆಲಸ– ಡಿಕೆಶಿ
ಬೆಂಗಳೂರು:
‘ಕೈ’ ಹಿಡಿಯಲು ಮುಂದಾಗಿರುವ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಪರ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಬುಧವಾರ ರಾತ್ರಿ ಭೇಟಿ ಮಾಡಿದ ಶರತ್‌, ಕಾಂಗ್ರೆಸ್‌ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಿವಕುಮಾರ್, ‘ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಶರತ್ ನಮ್ಮ (ಕಾಂಗ್ರೆಸ್‌) ಕಾರ್ಯಕರ್ತರ ಜೊತೆ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದರು.

‘ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಗುಂಡಿನ ದಾಳಿ ನಡೆದಿರುವ ಹಿಂದೆ ಕೆಲವು ಆಂತರಿಕ ವಿಚಾರಗಳಿವೆ. ಶುಕ್ರವಾರ ನಾನು ಬೆಳಗಾವಿಗೆ ಹೋಗುತ್ತಿದ್ದೇನೆ. ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಜೊತೆ ಈ ಬಗ್ಗೆ ಮಾತನಾಡಿ ಅಲ್ಲಿಯ ಸಮಸ್ಯೆ ಬಗೆಹರಿಸುತ್ತೇನೆ’ ಎಂದರು.

ಚುನಾವಣೆಯಲ್ಲಿ ಜಾತಿ ಓಲೈಕೆ
ದಾಬಸ್ ಪೇಟೆ:
ಜಾತಿ ಓಲೈಕೆ, ಕಾಂಚಾಣ ಹಂಚಿಕೆ, ಅನುಕಂಪದ ಮಾತು, ಪಕ್ಷ ರಾಜಕಾರಣ. ಇದು ಸೋಂಪುರ ಹೋಬಳಿಯ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಕಂಡು ಬರುತ್ತಿರುವ ಚಿತ್ರಣ.

ಒಂದೇ ಜಾತಿಯ ಇಬ್ಬರು ಸ್ಪರ್ಧಿಸಿದ್ದರೆ, ಅವರು ಅನ್ಯ ಜಾತಿಯವರ ಓಲೈಕೆ ಆರಂಭಿಸಿದ್ದಾರೆ. ಆ ಜಾತಿಯಲ್ಲಿನ ಪ್ರಮುಖರ ಮೂಲಕ ತಮ್ಮ ಪರ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಗೆಲುವಿಗೆ ನೇರ ಹಣಾಹಣಿ ಇರುವ ಕಡೆಗಳಲ್ಲಿ ಅಭ್ಯರ್ಥಿಗಳು ಎಲ್ಲರ ಮನೆಗೂ ತೆರಳಿ ಮತ ಯಾಚಿಸುತ್ತಿದ್ದಾರೆ. ಹಗೆತನ ಬಿಟ್ಟು ವಿರೋಧಿಗಳ ಮನೆಗೂ ಎಡತಾಕುತ್ತಿದ್ದಾರೆ.

’ಈಗಾಗಲೇ ಕೋಳಿ, ಮದ್ಯ ಹಂಚಿ ಮತದಾರರನ್ನು ಆಕರ್ಷಿಸುತ್ತಿರುವ ಅಭ್ಯರ್ಥಿಗಳು ಒಂದು ಮತಕ್ಕೆ ₹500, ₹ 1,000 ಕೊಡಲು ಮುಂದಾಗಿದ್ದಾರೆ. ಕೊಡುವವರು ಕೊಡಲಿ. ಕೊನೆಗೆ ಯಾರೋ ಒಬ್ಬರಿಗೆ ಮತ ಹಾಕುತ್ತೇವೆ’ ಎನ್ನುತ್ತಾರೆ ಹೋಬಳಿಯ ಮತದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.