ADVERTISEMENT

ಅಳವಡಿಕೆಯಾಗದ ‘ಧೂಮಪಾನ ನಿಷೇಧ’ ಫಲಕ

ಧೂಮಪಾನ: ಬಿಎಂಸಿಆರ್‌ಐ, ‘ಮಾಯಾ’ ಸಂಸ್ಥೆಯಿಂದ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 19:50 IST
Last Updated 1 ಅಕ್ಟೋಬರ್ 2021, 19:50 IST

ಬೆಂಗಳೂರು: ನಗರದಲ್ಲಿನ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆಯನ್ನು (ಕೋಟ್ಪಾ) ಪಾಲಿಸುತ್ತಿಲ್ಲ ಎಂಬುದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಗೂ ಸರ್ಕಾರೇತರ ಸಂಸ್ಥೆ ‘ಮಾಯಾ’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಜಯನಗರ ಮತ್ತು ಇಂದಿರಾನಗರದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಧೂಮಪಾನ ನಿಷೇಧ ಫಲಕವು ಶೇ 10.5 ರಷ್ಟು ಸ್ಥಳಗಳಲ್ಲಿ ಮಾತ್ರ ಗೋಚರಿಸಿದ್ದು,ನಿರ್ದಿಷ್ಟ ಧೂಮಪಾನ ಪ್ರದೇಶ (ಡಿಎಸ್ಎ) ಸ್ಥಾಪಿಸಲು ಶೇ 1.9 ರಷ್ಟುಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಮಾತ್ರಬಿಬಿಎಂಪಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿವೆ ಎನ್ನುವುದನ್ನು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.

‘ಸಮೀಕ್ಷೆಯ ವೇಳೆ ನಿರ್ದಿಷ್ಟ ಧೂಮಪಾನ ಪ್ರದೇಶ ಹಾಗೂನಿರಾಕ್ಷೇಪಣಾ ಪ್ರಮಾಣಪತ್ರದ ಬಗ್ಗೆ ಸಮೀಕ್ಷೆಯಲ್ಲಿ ಮಾಹಿತಿ ಕಲೆ ಹಾಕಲಾಗಿತ್ತು. ನಿರ್ದಿಷ್ಟ ಧೂಮಪಾನ ಪ್ರದೇಶ ಸ್ಥಾಪನೆ ಬಗ್ಗೆಶೇ 86.6 ರಷ್ಟು ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮಾಲೀಕರಿಗೆ ಮಾಹಿತಿಯೇ ಇರಲಿಲ್ಲ. ಶೇ 9.5 ರಷ್ಟು ಸ್ಥಳಗಳಲ್ಲಿ ಮಾತ್ರನಿರ್ದಿಷ್ಟ ಧೂಮಪಾನ ಪ್ರದೇಶ ಸ್ಥಾಪನೆ ಮಾಡಲಾಗಿದೆ’ ಎಂದು ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಂಗನಾಥ್ ಟಿ. ಎಸ್ ತಿಳಿಸಿದರು.

ADVERTISEMENT

‘ಎರಡು ದಶಕಗಳಿಂದ ಕೋಟ್ಪಾ ಕಾಯ್ದೆ ಅಸ್ತಿತ್ವದಲ್ಲಿದ್ದರೂ ಗಮನಾರ್ಹ ಸಂಖ್ಯೆಯಲ್ಲಿ ಕಾನೂನಿನ ಉಲ್ಲಂಘನೆ ಆಗುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕೂಡಲೇ ಈ ಕುರಿತು ಕ್ರಮಕೈಗೊಂಡು, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ’ ಎಂದು ಹೇಳಿದರು.

ಕಾಯ್ದೆಗೆ ತಿದ್ದುಪಡಿ ಅಗತ್ಯ:‘ನಿರ್ದಿಷ್ಟ ಧೂಮಪಾನ ಪ್ರದೇಶಗಳ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.ಕೋಟ್ಪಾ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ‘ಮಾಯಾ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೆಕ್ಸ್ ರೊಡ್ರಿಗಸ್ ಆಗ್ರಹಿಸಿದರು.

ತಂಬಾಕು ಮುಕ್ತ ಕರ್ನಾಟಕ ಒಕ್ಕೂಟದ ಸಲಹೆಗಾರ ಡಾ. ರಮೇಶ್ ಬಿಳಿಮಗ್ಗ, ‘ನೇರ ಮತ್ತು ಪರೋಕ್ಷ ಧೂಮಪಾನಗಳೆರಡೂ ನಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಸಾರ್ವಜನಿಕ ಸ್ಥಳಗಳು ಶೇ 100 ರಷ್ಟು ಧೂಮಪಾನ ಹೊಗೆ ಮುಕ್ತವಾಗಿರಬೇಕು. ನಿರ್ದಿಷ್ಟ ಧೂಮಪಾನ ಪ್ರದೇಶಗಳಲ್ಲಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ಅವುಗಳನ್ನು ನಿಷೇಧಿಸುವುದು ಉತ್ತಮ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.