ADVERTISEMENT

‘ಸಮರ್ಪಕವಾಗಿ ಬಳಕೆಯಾದ ಮುಸ್ಲಿಂ ಮೀಸಲಾತಿ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 21:18 IST
Last Updated 2 ಮಾರ್ಚ್ 2021, 21:18 IST
ವಿಚಾರ ಸಂಕಿರಣದಲ್ಲಿ (ಎಡದಿಂದ) ಬಿ.ಎಂ.ಹನೀಫ್, ಸಿ.ಎಸ್.ದ್ವಾರಕನಾಥ್, ಕರ್ನಾಟಕ ಮುಸ್ಲಿಂ ಜಮಾತ್ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನ ಎನ್.ಕೆ.ಎಂ.ಶಾಫಿ ಸಾದಿ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ (ಎಡದಿಂದ) ಬಿ.ಎಂ.ಹನೀಫ್, ಸಿ.ಎಸ್.ದ್ವಾರಕನಾಥ್, ಕರ್ನಾಟಕ ಮುಸ್ಲಿಂ ಜಮಾತ್ ಅಧ್ಯಕ್ಷ ಮುಫ್ತಿ ಅನ್ವರ್ ಅಲಿ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಮೌಲಾನ ಎನ್.ಕೆ.ಎಂ.ಶಾಫಿ ಸಾದಿ ಭಾಗವಹಿಸಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದಡಿ ನೀಡಿರುವ ಶೇ 4ರಷ್ಟು ಮೀಸಲಾತಿಯೂ ಸಮರ್ಪಕವಾಗಿ ಬಳಕೆಯಾಗಿಲ್ಲ.ಸಮುದಾಯದಲ್ಲಿರುವ ಅತ್ಯಂತ ಹಿಂದುಳಿದ ವೃತ್ತಿ ಸಮುದಾಯಗಳ ಕುರಿತು ಕುಲಶಾಸ್ತ್ರೀಯ ಅಧ್ಯಯನ ತುರ್ತಾಗಿ ನಡೆಯಬೇಕಿದೆ’ಎಂದು ರಾಜ್ಯ ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ತಿಳಿಸಿದರು.

ಕರ್ನಾಟಕ ಮುಸ್ಲಿಂ ಜಮಾತ್‌ನ ಬೆಂಗಳೂರು ನಗರ ಜಿಲ್ಲಾ ಸಮಿತಿಯು ‘ಮುಸ್ಲಿಂ ಮೀಸಲಾತಿಯ ಪ್ರಾಯೋಗಿಕತೆ’ ಕುರಿತು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮೀಸಲಾತಿ ಎನ್ನುವುದು ಬಡತನ ನಿವಾರಣಾ ಕಾರ್ಯಕ್ರಮವಲ್ಲ. ಅದನ್ನು ಮನಬಂದಂತೆ ಕೊಡಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡಬೇಕಾಗಿರುವುದುಸಮಾನ ಪ್ರಾತಿನಿಧ್ಯವೇ ಹೊರತು ಮೀಸಲಾತಿಯಲ್ಲ. ಅಂಬೇಡ್ಕರ್ ಹೇಳಿದ್ದೂ ಇದನ್ನೇ. ಯಾವ ಕ್ಷೇತ್ರದಲ್ಲಿ ಯಾರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲವೋ ಅದನ್ನು ಒದಗಿಸುವುದು ಮೀಸಲಾತಿಯ ನೈಜ ಉದ್ದೇಶ’ ಎಂದರು.

ADVERTISEMENT

‘ಟಿಪ್ಪು ಕಾಲದಲ್ಲೇ ಮೀಸಲಾತಿ ಮೊದಲಿಗೆತತ್ವದ ರೂಪದಲ್ಲಿ ರಾಜ್ಯದಲ್ಲಿ ಜಾರಿಗೆ ಬಂತು. ಅದನ್ನು ಪ್ರಾತಿನಿಧ್ಯ ಎನ್ನಲಾಯಿತು.ಮೈಸೂರು ಒಡೆಯರ್ ಕಾಲದಲ್ಲಿ ಶಾಸನಬದ್ಧವಾಗಿ ಮೀಸಲಾತಿ ರೂಪದಲ್ಲಿ ತಾಳಿತು. ಆಗ ಎಲ್ಲ ಹುದ್ದೆಗಳಲ್ಲಿ ಬ್ರಾಹ್ಮಣರೇ ತುಂಬಿದ್ದರು. ಬಳಿಕ ಇತರ ಜಾತಿಗಳಿಗೂ ಶೇ 50ರಷ್ಟು ಮೀಸಲಾತಿ ಜಾರಿ ಮಾಡಲಾಯಿತು’ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ಬಿ.ಎಂ.ಹನೀಫ್,‘ಮುಸ್ಲಿಂ ಸಮುದಾಯದಲ್ಲಿ ಮೀಸಲಾತಿ ಕುರಿತು ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಸಮುದಾಯದ ರಾಜಕೀಯ ನಾಯಕರು ಈ ಕೆಲಸದಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ವಿವಿಧ ಆಯೋಗದ ವರದಿಗಳಲ್ಲಿ ಮುಸ್ಲಿಂ ಸಮುದಾಯದಲ್ಲಿರುವ ಅತ್ಯಂತ ಹಿಂದುಳಿದ ಸುಮಾರು 25ಕ್ಕೂ ಹೆಚ್ಚು ವೃತ್ತಿಗುಂಪುಗಳನ್ನು ಗುರುತಿಸಲಾಗಿದೆ. ಇವರಿಗಾಗಿ ಪ್ರತ್ಯೇಕಅಭಿವೃದ್ಧಿ ನಿಗಮ ಸ್ಥಾಪಿಸಿ, ₹2 ಸಾವಿರ ಕೋಟಿ ಅನುದಾನ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗವು ವಿಶ್ವದ್ಯಾಲಯವೊಂದರ ನೆರವಿನೊಂದಿಗೆ ಮುಸ್ಲಿಮರ ಕುಲಮೂಲ ಸಮೀಕ್ಷೆ ನಡೆಸಬೇಕು. ರಾಜ್ಯದಲ್ಲಿ ಅಲ್ಪಸಂಖ್ಯಾತ ಆಯೋಗದ ಬದಲಿಗೆ ನ್ಯಾ.ರಾಜಿಂದರ್ ಸಾಚಾರ್ ವರದಿ ಸೂಚಿಸಿದಂತೆ ರಾಜ್ಯ ಸಮಾನ ಅವಕಾಶ ಆಯೋಗ ಸ್ಥಾಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.