ಟೆಕಿ ಅತುಲ್ ಸುಭಾಷ್, ಪತ್ನಿ ನಿಖಿತಾ
ಬೆಂಗಳೂರು: ಉತ್ತರ ಪ್ರದೇಶದ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ಮಾರತ್‌ಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ ಕೆಲವು ಮಾಹಿತಿ ಕಲೆಹಾಕಿದ್ದಾರೆ.
ಪತ್ನಿ ವಿರುದ್ಧ ಕಿರುಕುಳದ ಆರೋಪ ಮಾಡಿ ಮರಣಪತ್ರ ಬರೆದಿಟ್ಟು ಡಿ.9ರಂದು ನೇಣು ಹಾಕಿಕೊಂಡು ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. 23 ಪುಟಗಳ ಮರಣಪತ್ರ ಹಾಗೂ 90 ನಿಮಿಷಗಳ ವಿಡಿಯೊ ಮಾಡಿ ಅದರಲ್ಲಿ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಅವರು ಉಲ್ಲೇಖಿಸಿದ್ದ ವಿಚಾರಗಳು ಚರ್ಚೆಗೆ ಗ್ರಾಸ ಆಗಿದ್ದವು.
ಮೃತ ಅತುಲ್ ಅವರ ಸಹೋದರ ಬಿಕಾಸ್‌ಕುಮಾರ್ ಅವರು ನೀಡಿದ ದೂರು ಆಧರಿಸಿ, ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯ ಅವರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಹೊರ ರಾಜ್ಯದಲ್ಲಿ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ಒಳಪಡಿಸಿದ್ದರು. ಸದ್ಯ ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
‘ಘಟನೆಯಲ್ಲಿ ಅತುಲ್ ಸಂತ್ರಸ್ತ ಅಲ್ಲ; ನಾನೇ ನಿಜವಾದ ಸಂತ್ರಸ್ತೆ’ ಎಂದು ನಿಖಿತಾ ಪೊಲೀಸರ ಎದುರು ಅಳಲು ತೋಡಿಕೊಂಡಿದ್ದಾರೆ.
‘ಮದುವೆಯಾದ ಆರಂಭದಲ್ಲಿ ನಾನೂ ಬೆಂಗಳೂರಿಗೆ ಬಂದಿದ್ದೆ. ಅವರು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಕೃತಿಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಂಜುನಾಥ ಲೇಔಟ್‌ನ ಡೆಲ್ಫಿನಿಯಂ ರೆಸಿಡೆನ್ಸಿಯ ಮೂರನೇ ಮಹಡಿಯ ಫ್ಯ್ಲ್ಯಾಟ್‌ನ ನಂ. ಟಿ–06ನಲ್ಲಿ ನೆಲಸಿದ್ದೆವು. ಅಡುಗೆ ಚೆನ್ನಾಗಿ ಮಾಡಿದ್ದರೂ ಚೆನ್ನಾಗಿಲ್ಲ ಎಂದು ರೇಗುತ್ತಿದ್ದರು. ಮಾಂಸಾಹಾರದ ಅಡುಗೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಇಷ್ಟೆಲ್ಲಾ ಕಿರುಕುಳವಾದರೂ ನಾನು ಮನೆ ಬಿಟ್ಟು ಉತ್ತರ ಪ್ರದೇಶಕ್ಕೆ ಹೋಗಿರಲಿಲ್ಲ. ಕಿರುಕುಳ ಹೆಚ್ಚಾದ ಮೇಲೆ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಉದ್ಭವಿಸಿತ್ತು ಎಂಬುದಾಗಿ ಪೊಲೀಸರ ಎದುರು ಹೇಳಿದ್ದಾರೆ’ ಎಂದು ಗೊತ್ತಾಗಿದೆ.
‘ಅತುಲ್ ಮರಣಪತ್ರದಲ್ಲಿ ಉಲ್ಲೇಖಿಸಿರುವ ಆರೋಪಗಳು ಸುಳ್ಳು. ನಾಲ್ಕು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಅವರ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿಯೂ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ’ ಎಂದು ಗೊತ್ತಾಗಿದೆ.
ತನ್ನ ಸಹೋದರನ ಸಾವಿಗೆ ಆತನ ಪತ್ನಿ, ಪತ್ನಿಯ ತಾಯಿ, ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಕಾರಣ ಎಂಬುದಾಗಿ ಬಿಕಾಸ್‌ಕುಮಾರ್ ದೂರು ನೀಡಿದ್ದರು. ಅತುಲ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ₹3 ಕೋಟಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಅತುಲ್ ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿದ್ದರು. ನಾಲ್ವರ ಪ್ರಚೋದನೆಯಿಂದಲೇ ಸಹೋದರ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.