ADVERTISEMENT

ಬೆಂಗಳೂರು: ಅಕ್ರಮ ಕಲ್ಲು ಗಣಿ, ಶಾಸಕ ಮುನಿರತ್ನಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 15:39 IST
Last Updated 14 ಜುಲೈ 2023, 15:39 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ಅಕ್ರಮವಾಗಿ ಬಂಡೆಗಳನ್ನು ಸ್ಫೋಟಿಸಿ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪದಡಿ ದಾಖಲಾಗಿರುವ ಪ್ರರಕಣದ ವಿಚಾರಣೆಗೆ ಹಾಜರಾಗುವಂತೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್. ಮುನಿರತ್ನ ಅವರಿಗೆ ಚಿಕ್ಕಜಾಲ ಠಾಣೆ ಪೊಲೀಸರು ನೋಟಿಸ್ ನೀಡಿದ್ದು, ಕೆಲ ಷರತ್ತುಗಳನ್ನೂ ವಿಧಿಸಿದ್ದಾರೆ.

ಯಲಹಂಕ ತಹಶೀಲ್ದಾರ್ ಅನಿಲ್ ಅರೋಳಿಕರ್ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ದಾಖಲೆಗಳ ಪರಿಶೀಲನೆಗಾಗಿ ತನಿಖೆ ಮುಂದುವರಿಸಿದ್ದಾರೆ. ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ಹಾಗೂ ದಾಖಲೆ ಒದಗಿಸುವಂತೆ ತಿಳಿಸಿ ಆರೋಪಿ ಮುನಿರತ್ನಗೆ ನೋಟಿಸ್ ಜಾರಿ ಮಾಡಲಾಗಿದೆ.

‘ನೋಟಿಸ್ ಪ್ರತಿ ತಲುಪಿದ ಮೂರು ದಿನದೊಳಗಾಗಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕು. ಜಿಲಿಟಿನ್ ಕಡ್ಡಿ ಬಳಕೆ ಸಂಬಂಧ ತಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

‘ಪ್ರಕರಣದ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು. ಜೀವ ಬೆದರಿಕೆಯೊಡ್ಡಬಾರದು. ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಷರತ್ತುಗಳನ್ನು ಉಲ್ಲಂಘಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.