ಬೆಂಗಳೂರು: ಅನಧಿಕೃತ ಕಟ್ಟಡ ಹಾಗೂ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಿಸಿದ ಕಟ್ಟಡಗಳನ್ನು ಗುರುತಿಸಿ, ತೆರವು ಕಾರ್ಯ ನಡೆಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಹದೇವಪುರ ವಲಯದ ನಲ್ಲೂರುಹಳ್ಳಿ ಮೆಟ್ರೊ ನಿಲ್ದಾಣದಿಂದ ನಲ್ಲೂರಹಳ್ಳಿ ಬೋರ್ವೆಲ್ ರಸ್ತೆ ಮುಖಾಂತರ ವೈಟ್‌ಫೀಲ್ಡ್ ಮುಖ್ಯರಸ್ತೆವರೆಗೆ ಬುಧವಾರ ಪರಿಶೀಲನೆ ನಡೆಸಿ, ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲು ಹೇಳಿದರು.
ನಲ್ಲೂರಹಳ್ಳಿ ಕಾಲೊನಿಯ 3ನೇ ಅಡ್ಡರಸ್ತೆ ಹಾಗೂ 7ನೇ ಅಡ್ಡರಸ್ತೆಯಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ನಿಯಮಾನುಸಾರ ಅನಧಿಕೃತ ಕಟ್ಟಡದ ಭಾಗವನ್ನು ತ್ವರಿತವಾಗಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಾಡ್ಸ್ ವರ್ತ್ ಎನ್ಕ್ಲೇವ್ ರಸ್ತೆ ಬಳಿ ಚರಂಡಿಯ ನೀರು ರಸ್ತೆಗೆ ಬರುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಿ ಕಟ್ಟಡದ ಮಾಲೀಕರಿಗೆ ನೋಟಿಸ್ ನೀಡಲು ಹಾಗೂ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಆದೇಶಿಸಿದರು.
ನಲ್ಲೂರಹಳ್ಳಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ತೆರವುಗೊಳಿಸಬೇಕು. ರಾಜಕಾಲುವೆಗೆ ತಡೆಗೋಡೆ ನಿರ್ಮಿಸಬೇಕು, ಬಫರ್ ವಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಬಾರದು ಎಂದರು.
ಪಾದಚಾರಿ ಮಾರ್ಗ ಒತ್ತುವರಿ ಹಾಗೂ ಅನಧಿಕೃತ ಒಎಫ್‌ಸಿ ತೆರವುಗೊಳಿಸಿ, ರಸ್ತೆ ಪಕ್ಕದ ಚರಂಡಿಗಳ ಹೂಳೆತ್ತಬೇಕು. ಮುರಿದುಬಿದ್ದ ಸ್ಲ್ಯಾಬ್‌ಗಳನ್ನು ಸರಿಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಲಯ ಆಯುಕ್ತ ರಮೇಶ್, ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.