ADVERTISEMENT

ವಸೂಲಾಗದ ಕೃಷಿ ಸಾಲ: ಬ್ಯಾಂಕ್‌ಗಳ ಕಳವಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:53 IST
Last Updated 15 ಆಗಸ್ಟ್ 2019, 19:53 IST
   

ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ಬ್ಯಾಂಕ್‌ಗಳು ನೀಡಿರುವ ಸಾಲ ವಸೂಲಾತಿ ಕಷ್ಟಕರವಾಗಿದ್ದು, ವಸೂಲಾಗದ ಸಾಲದ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದಕ್ಕೆ ವಾಣಿಜ್ಯ ಬ್ಯಾಂಕ್‌ಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

ಒಂದು ಕಡೆ ಸಾಲ ಮನ್ನಾ ಆಗಿರು ವುದರಿಂದ, ಅದರ ನೆಪ ಹೇಳಿಕೊಂಡು ಬಾಕಿ ಹಣ ಪಾವತಿಗೆ ಮುಂದಾಗುತ್ತಿಲ್ಲ. ಮತ್ತೊಂದೆಡೆ ಬರ ಕಾಡುತ್ತಿದ್ದು, ಮರು ಪಾವತಿಸುವುದು ರೈತರಿಗೂ ಕಷ್ಟಕರವಾಗಿದೆ.

ಇದರಿಂದಾಗಿ ವಸೂಲಾಗದ ಒಟ್ಟಾರೆ ಸಾಲದ ಪ್ರಮಾಣದಲ್ಲಿ ಕೃಷಿ ಕ್ಷೇತ್ರದ ಪಾಲು ಶೇ 36ಕ್ಕೆ ಏರಿಕೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ ರೈತರ ಬೆಳೆ ಸಾಲ ಮನ್ನಾ ಘೋಷಿಸಿದ ಸಮಯದಲ್ಲಿ 2018 ಮಾರ್ಚ್ ಅಂತ್ಯಕ್ಕೆ ವಸೂಲಾಗದ ಸಾಲದ ಪ್ರಮಾಣ ಶೇ 40ಕ್ಕೆ ಹೆಚ್ಚಳವಾಗಿತ್ತು. ಕೃಷಿ ಸಾಲದ ಬಾಕಿ ಮೊತ್ತ ಹೆಚ್ಚಿದಷ್ಟೂ ಮತ್ತೆ ಸಾಲ ನೀಡುವುದು ಬ್ಯಾಂಕ್‌ಗಳಿಗೆ ಕಷ್ಟಕರವಾಗುತ್ತದೆ.

ADVERTISEMENT

ಹಿಂದಿನ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಂಕ್‌ಗಳಿಗೆ ಹಣ ಪಾವತಿಯಾಗಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರವೂ ಬದಲಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಮಸ್ಯೆ ನಿಭಾಯಿಸುವ ದೊಡ್ಡ ಸವಾಲು ಅವರಿಗೆ ಎದುರಾಗಿದೆ.

ರಾಜ್ಯದ ಐದು ಪ್ರಮುಖ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿ ಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿವೆ. ಸಾಲ ವಸೂಲಿಗೆ ಸಹಕಾರ ನೀಡಿ, ರೈತರನ್ನು ಪ್ರೋತ್ಸಾಹಿಸುವಂತೆ ಸರ್ಕಾ ರದ ಮೊರೆ ಹೋಗಲು ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸಾಲ ಮನ್ನಾ ಯೋಜನೆ ಪ್ರಕಟಿಸುವ ಮುನ್ನವೇ ರೈತರು ಸಾಲ ಬಾಕಿ ಪಾವತಿಯನ್ನು ನಿಲ್ಲಿಸಿದ್ದರು. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಸಹಕಾರ ನೀಡಲು ಸರ್ಕಾರ ಮತ್ತಷ್ಟು ವಿಳಂಬ ಮಾಡಿದರೆ ಕಾನೂನು ವ್ಯಾಪ್ತಿಯಲ್ಲಿ ಸಾಲ ವಸೂಲಿ ಕಷ್ಟಕರವಾಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ.

‘ಬೆಳೆ ಸಾಲ ಮನ್ನಾ ಯೋಜನೆ ಪ್ರಕಟಿಸಿದ್ದರಿಂದಾಗಿ ಕೃಷಿ ಸಾಲ ಮರುಪಾವತಿಗೆ ಹಿನ್ನಡೆ ಆಯಿತು. ಈ ಯೋಜನೆಯಲ್ಲಿ ಹಣ ಬಿಡುಗಡೆ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವುದರಿಂದ ಬ್ಯಾಂಕ್‌ಗಳ ಸಾಲದ ಪ್ರಮಾಣ ಇಳಿಕೆಯಾಗಲಿದೆ’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದರು.

ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ ಗಳಲ್ಲಿ 16.41 ಲಕ್ಷ ರೈತರು ಪಡೆದಿದ್ದ ಸಾಲ ಬಾಕಿಗೆ ₹9157 ಕೋಟಿಯನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ. ಇನ್ನೂ 6 ಲಕ್ಷ ರೈತರು ಈ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ ಎಂದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ₹2 ಲಕ್ಷದ ವರೆಗಿನ ಸಾಲ ಮನ್ನಾ ಮಾಡಿದ್ದು, ಈ ಹಣವನ್ನು ಪಾವತಿಸಲು ಸರ್ಕಾರ ಸಿದ್ಧವಾಗಿತ್ತು. ಆದರೆ ವಾಣಿಜ್ಯ ಬ್ಯಾಂಕ್‌ಗಳು ಸಹಕಾರ ನೀಡಲಿಲ್ಲ. ಕೊನೆಗೆ ಮಾತುಕತೆ ನಡೆಸಿದ ನಂತರ ಅಂತಿಮವಾಗಿ ₹ 965 ಕೋಟಿ ಹಣ ಬಿಡುಗಡೆ ಮಾಡಲಾಯಿತು’ ಮಾಜಿ ಸಹಕಾರ ಸಚಿವಬಂಡೆಪ್ಪ ಕಾಶೆಂಪೂರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.