ನೃಪತುಂಗ ವಿವಿ
ಬೆಂಗಳೂರು: ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ನೃಪತುಂಗ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿಯೇ ಸುಸಜ್ಜಿತವಾದ ಪ್ರತ್ಯೇಕ ಬ್ಲಾಕ್ ನಿರ್ಮಿಸಲಾಗಿದೆ.
ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನದಡಿ (ರೂಸಾ) ವಿಶ್ವವಿದ್ಯಾಲಯಕ್ಕೆ ₹55 ಕೋಟಿ ಅನುದಾನ ದೊರೆತಿದ್ದು, ಇದರಲ್ಲಿ ₹52.08 ಕೋಟಿ ಖರ್ಚು ಮಾಡಿ ಹೊಸ ಕಟ್ಟಡ ಕಟ್ಟಲಾಗಿದೆ. ಇದರಲ್ಲಿ 28 ಬೋಧನಾ ಕೊಠಡಿಗಳಿದ್ದು, ಸ್ನಾತಕೋತ್ತರ ಕೋರ್ಸ್‌ಗಳಿಗೆ ಇದನ್ನು ಮೀಸಲಿಡಲಾಗಿದೆ. 2021ರಲ್ಲಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದು, ಇದಾದ ನಂತರ ಹಂತ ಹಂತವಾಗಿ ರೂಸಾ ಅಡಿ ಹಣ ಬಿಡುಗಡೆಯಾಗಿದೆ. ಇದರಲ್ಲಿ ಶೇ 60ರಷ್ಟನ್ನು ಕೇಂದ್ರ ಸರ್ಕಾರ ಹಾಗೂ ಶೇ 40ರಷ್ಟನ್ನು ರಾಜ್ಯ ಸರ್ಕಾರ ನೀಡಿವೆ. ನೆಲ ಮಹಡಿ ಬಿಟ್ಟು, ಒಟ್ಟು ಐದು ಮಹಡಿಗಳನ್ನು ನಿರ್ಮಿಸಲಾಗಿದೆ ಎಂದು ಕುಲಸಚಿವೆ ಪ್ರೊ.ಎ.ಸಿ.ಮಂಜುಳಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನೂತನ ಬ್ಲಾಕ್‌ನಲ್ಲಿ 6 ಮತ್ತು 7ನೇ ಮಹಡಿಗಳಿಗೆ ಹೊರ ಭಾಗದ ಗೋಡೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಒಳಭಾಗದ ಕೆಲಸಗಳಿಗೆ ಸುಮಾರು ₹5 ಕೋಟಿ ಅನುದಾನ ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಸರ್ಕಾರ ಅನುದಾನ ನೀಡಿದರೆ, ಉಳಿದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ವಿವಿಧ ಪ್ರಯೋಗಾಲಯಗಳಿಗೆ ₹2.18 ಕೋಟಿ ವೆಚ್ಚದಲ್ಲಿ ನೂತನ ಉಪಕರಣಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಹೊಸ ಬ್ಲಾಕ್ ಉದ್ಘಾಟನೆಯಾದ ಬಳಿಕ ಈ ಪ್ರಕ್ರಿಯೆ ಶುರುವಾಗಲಿದೆ. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಅತ್ಯಾಧುನಿಕವಾದ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಈ ವರ್ಷ ಹೊಸದಾಗಿ ಎಂಸಿಎ ಆರಂಭಿಸಲಾಗಿದೆ. ಬಿಸಿಎ, ಬಿಬಿಎಗೆ ಹೆಚ್ಚು ಬೇಡಿಕೆ ಇದೆ. ಬಿ.ಎಸ್ಸಿ ಬಿ.ಇಡಿ ಪ್ರವೇಶಕ್ಕೆ 50 ಸೀಟುಗಳು ಇವೆ. ಆದರೆ, 500 ಅರ್ಜಿಗಳು ಬಂದಿವೆ. ಮುಂದಿನ ವರ್ಷದಿಂದ ಕೃತಕ ಬುದ್ದಿಮತ್ತೆ ಸೇರಿದಂತೆ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಹಂಗಾಮಿ ಕುಲಪತಿ ಪ್ರೊ.ಫಜೀಹಾ ಸುಲ್ತಾನ ತಿಳಿಸಿದರು.
‘ಇನ್ನೂ ಪರಿನಿಯಮಾವಳಿ ಆಗಿಲ್ಲ’
ವಿಶ್ವವಿದ್ಯಾಲಯದಲ್ಲಿ ಈಗ ಇರುವ ಸಿಬ್ಬಂದಿ ತಾಂತ್ರಿಕವಾಗಿ ಈಗಲೂ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲೇ ಇದ್ದಾರೆ. ನಿಯೋಜನೆ ಮೇಲೆ ವಿ.ವಿ.ಗೆ ಬಂದವರು ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಇದಕ್ಕೆ ಕಾರಣ, ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದು ಐದು ವರ್ಷವಾದರೂ ಪರಿನಿಯಮಾವಳಿಗಳ ರಚನೆ ಆಗದೆ ಇರುವುದು.
ಒಮ್ಮೆ ಪರಿನಿಯಮಾವಳಿ ರಚನೆಯಾದರೆ, ಈಗಿರುವ ಸಿಬ್ಬಂದಿ ಪೈಕಿ ವಿಶ್ವವಿದ್ಯಾಲಯದಲ್ಲಿ ಉಳಿಯುವವರು ಯಾರು? ಇಲ್ಲಿಂದ ಹೊರಗೆ ಹೋಗುವವರು ಯಾರು? ಎಂಬುದು ನಿರ್ಧಾರವಾಗಲಿದೆ. ಅಲ್ಲದೆ ಹೊಸ ನೇಮಕಾತಿಗೂ ಅನುಕೂಲವಾಗಲಿದೆ. ಸರ್ಕಾರ ಆದಷ್ಟು ಬೇಗ ಪರಿನಿಯಮಾವಳಿಗಳ ರಚನೆ ಮಾಡಬೇಕು ಎಂಬುದು ಇಲ್ಲಿ ಕಾರ್ಯನಿರ್ವಹಿಸುವ ಬೋಧಕರ ಬೇಡಿಕೆ.
ವಿಶ್ವವಿದ್ಯಾಲಯದಲ್ಲೇ ಉಳಿದರೆ ಹಳೆಯ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಹೊರಗೆ ಹೋದರೆ (ಕಾಲೇಜು ಶಿಕ್ಷಣ ಇಲಾಖೆ ಆಯ್ಕೆ ಮಾಡಿಕೊಂಡರೆ) ಪಿಂಚಣಿ ಸಿಗಲಿದೆ. ಹೀಗಾಗಿ 2006ಕ್ಕೂ ಮುನ್ನ ನೇಮಕವಾಗಿರುವ ಸಿಬ್ಬಂದಿ ಹೊರಗೆ ಹೋಗಲು ಬಯಸುತ್ತಾರೆ. ಈ ಬಗ್ಗೆ ಗೊಂದಲಗಳಿದ್ದು, ಸರ್ಕಾರವೇ ಇದನ್ನು ಬಗೆಹರಿಸಬೇಕು ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.
*****
ಹಾಸ್ಟೆಲ್ ಆರಂಭಿಸುವ ಅಗತ್ಯವಿದೆ. ಆದರೆ, ಇದಕ್ಕೆ ಜಾಗದ ಕೊರತೆ ಇದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಅಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಕೇಳಿದ್ದೇವೆ. -ಪ್ರೊ.ಫಜೀಹಾ ಸುಲ್ತಾನ, ಹಂಗಾಮಿ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.