ADVERTISEMENT

‘ಒಸಿ’: ವಿದ್ಯುತ್‌ ಸಂಪರ್ಕ ಪಡೆಯಲು ಗ್ರಾಹಕರ ಪರದಾಟ

ಬೆಸ್ಕಾಂನಲ್ಲಿ ಸುಮಾರು 88 ಸಾವಿರ ಅರ್ಜಿಗಳು ಬಾಕಿ* ಕೂಡಲೇ ಸಂಪರ್ಕ ನೀಡಲು ಗುತ್ತಿಗೆದಾರರ ಒತ್ತಾಯ

ಗಾಣಧಾಳು ಶ್ರೀಕಂಠ
Published 9 ಜೂನ್ 2025, 20:16 IST
Last Updated 9 ಜೂನ್ 2025, 20:16 IST
besocm logo
besocm logo   

ಬೆಂಗಳೂರು: ಕಟ್ಟಡದ ಸ್ವಾಧೀನಾನುಭವ ಪತ್ರ (ಒಸಿ) ಕಡ್ಡಾಯ ಮಾಡಿರುವುದರಿಂದ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಇದರಿಂದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಸುಮಾರು 88 ಸಾವಿರ ಗ್ರಾಹಕರು ತಮ್ಮ ಮನೆಗಳಿಗೆ ವಿದ್ಯುತ್‌ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.

ಹೊಸ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರವನ್ನು ಕಡ್ಡಾಯಗೊಳಿಸಿದ ಸುಮಾರು ಎರಡು ತಿಂಗಳ ನಂತರ ವಿದ್ಯುತ್ ಸಂಪರ್ಕ ಕಲ್ಪಿಸುವ, ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ಇದು ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ.

ಸುಪ್ರೀಂ ಕೋರ್ಟ್ ಆದೇಶ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ(ಕೆಇಆರ್‌ಸಿ) ಸೂಚನೆ ಪ್ರಕಾರ 'ಒಸಿ' ನಿಯಮವನ್ನು ಅನುಷ್ಠಾನಗೊಳಿಸಲು ಏಪ್ರಿಲ್ 4ರಂದು ಬೆಸ್ಕಾಂ ಆದೇಶ ಮಾಡಿದೆ. ಈ ಆದೇಶ ಹೊರ ಬೀಳುವ ಮೊದಲು ಅರ್ಜಿ ಸಲ್ಲಿಸಿದವರಿಗೂ ಇದೇ ನಿಯಮ ಅನ್ವಯ ಮಾಡಿರುವುದರಿಂದ ಒಂದೆಡೆ ಗ್ರಾಹಕರು, ಮತ್ತೊಂದೆಡೆ ವಿದ್ಯುತ್ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಏಪ್ರಿಲ್‌ಗೆ ಮುನ್ನ ಮನೆ ನಿರ್ಮಾಣ ಮಾಡಿ, ಅರ್ಜಿ ಸಲ್ಲಿಸಿದವರಿಗೂ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಕೆಲವು ಕಡೆ ಮೀಟರ್‌ ಹಾಕಿದ್ದರೆ, ಆರ್‌.ಆರ್‌ ನಂಬರ್ ಸಿಕ್ಕಿಲ್ಲ. ಕೆಲವರು ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲೇ ಮನೆ ಪ್ರವೇಶ ಮಾಡಿ, ದುಬಾರಿ ಶುಲ್ಕ ನೀಡುತ್ತಿದ್ದಾರೆ.

ಮನೆ ನಿರ್ಮಾಣದ ಒಪ್ಪಂದದ ಪ್ರಕಾರ, ವಿದ್ಯುತ್ ಸರಬರಾಜು ಮಂಜೂರಾದ ನಂತರವೇ, ಮಾಲೀಕರು ಗುತ್ತಿಗೆದಾರರಿಗೆ ಪೂರ್ಣ ಹಣ ನೀಡುತ್ತಾರೆ, ಗುತ್ತಿಗೆದಾರರು ಕೀ ಹಸ್ತಾಂತರ ಮಾಡುತ್ತಾರೆ. ಈಗ ಅರ್ಜಿಗಳು ಬಾಕಿ ಇರುವುದರಿಂದ, ಮನೆ ನಿರ್ಮಾಣದ  ಕೆಲಸಗಳು ಪೂರ್ಣಗೊಂಡಿದ್ದರೂ, ಅನೇಕ ಮಾಲೀಕರು ಬಾಕಿ ಹಣವನ್ನು ತಡೆ ಹಿಡಿದಿದ್ದಾರೆ. ಈಗ ಮನೆ ಮಾಲೀಕರು ಮತ್ತು ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವಿದ್ಯುತ್ ಗುತ್ತಿಗೆದಾರರೊಬ್ಬರು ಪರಿಸ್ಥಿತಿ ವಿವರಿಸಿದರು.

‘ಕಂದಾಯ ನಿವೇಶನ ಮತ್ತು ನಗರದ ‘ಬಿ’ ಖಾತಾ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ, ಆರಂಭದ ಅನುಮತಿ ಪತ್ರ(ಸಿಸಿ), ನಕ್ಷೆ ಮಂಜೂರಾತಿ ಪತ್ರ ಮತ್ತು ಸ್ವಾಧೀನಾನುಭವ ಪತ್ರ(ಒಸಿ) ಸಿಗುವುದಿಲ್ಲ, ಹೀಗಾಗಿ, ಕಂದಾಯ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನೂ‌ ಕೊಡುತ್ತಿಲ್ಲ, ಇದರಿಂದ ರಾಜ್ಯದಲ್ಲಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ಕರ್ನಾಟಕ ವಿದ್ಯುತ್ ಗುತ್ತಿಗೆದಾರರ ಸಂಘದ (ಕೆಎಸ್‌ಎಲ್‌ಇಸಿಎ) ಅಧ್ಯಕ್ಷ ಸಿ. ರಮೇಶ್ ಬೇಸರ ವ್ಯಕ್ತಪಡಿಸಿದರು.

‘ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ, ಬೆಸ್ಕಾಂ ಆದೇಶ ಮಾಡಿರುವುದಕ್ಕೂ ಮುನ್ನ ಕಾರ್ಯಾದೇಶ ನೀಡಿರುವ ಮನೆಗಳಿಗಾದರೂ ವಿದ್ಯುತ್ ಸಂಪರ್ಕ ನೀಡಲಿ. ಇಲ್ಲವೇ, ಒಸಿ ಕೊಡುವುದಕ್ಕೆ ಸಮರ್ಪಕ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಲಿ’ ಎಂಬುದು ಅವರ ಒತ್ತಾಯ.

‘ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳನ್ನು ಬಿಟ್ಟು, ಆರು ಚದರ ಅಡಿಯಷ್ಟು ನಿವೇಶನದಲ್ಲಿ ನಿರ್ಮಿಸಿಕೊಂಡಿರುವ ಸಣ್ಣ ಸಣ್ಣ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ತಕ್ಷಣ ವ್ಯವಸ್ಥೆ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಕೆ.ಜೆ.ಜಾರ್ಜ್‌

’ವಿದ್ಯುತ್ ಸಂಪರ್ಕ ಸಿಕ್ಕಿಲ್ಲ ಸಮಸ್ಯೆಯಾಗಿದೆ’

‘ನನ್ನದು ಬಿ ಖಾತಾ ನಿವೇಶನ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ತೆಗೆದುಕೊಂಡು ಮನೆ ನಿರ್ಮಾಣ ಆರಂಭಿಸಿದೆ. ಈ ವರ್ಷದ ಆರಂಭದಲ್ಲಿ ಮನೆ ಪೂರ್ಣಗೊಂಡಾಗವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದೆವು. ಗೃಹಪ್ರವೇಶ ಮಾಡಬೇಕಿತ್ತು. ಆದರೆ ಬೆಸ್ಕಾಂನಿಂದ ‘ಒಸಿ’ ಕಡ್ಡಾಯಗೊಳಿಸಿದ್ದರಿಂದ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಬಿ ಖಾತಾದವರಿಗೆ ಬಿಬಿಎಂಪಿಯಿಂದ ಸಿಸಿ ಒಸಿ ಯಾವುದೂ ಕೊಡುವುದಿಲ್ಲ. ಸದ್ಯಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕದೊಂದಿಗೆ ಮನೆ ಪ್ರವೇಶ ಮಾಡಿದ್ದೇವೆ. ವಿದ್ಯುತ್‌ ಶುಲ್ಕ ದುಬಾರಿಯಾಗುತ್ತಿದೆ. ನಮ್ಮಂತೆ ಹಲವರಿಗೆ ಈ ರೀತಿ ತೊಂದರೆಯಾಗಿದೆ’ ಎಂದು ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಿದಿರಕಲ್ಲು ವ್ಯಾಪ್ತಿಯ ನಿವಾಸಿಯೊಬ್ಬರು ತಾವು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.