ADVERTISEMENT

ಪ್ರವಾಸೋದ್ಯಮ: ರಾಜ್ಯದ ಸಹಕಾರ ಕೋರಿದ ಒಡಿಶಾ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST

ಬೆಂಗಳೂರು:ನಗರದಲ್ಲಿ ಎರಡನೇ ಬಾರಿ ಪ್ರವಾಸೋದ್ಯಮ ‘ರೋಡ್‌ ಷೋ’ ಆಯೋಜಿಸಿದ ಒಡಿಶಾ, ರಾಜ್ಯದ ಪ್ರವಾಸಿ ಸಂಸ್ಥೆಗಳ ಪ್ರತಿನಿಧಿಗಳು, ಬ್ರಾಂಡ್‌ ಮತ್ತು ಹೂಡಿಕೆದಾರರೊಂದಿಗೆಸೋಮವಾರ ಸಭೆ ನಡೆಸಿತು.

ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಡಿಶಾ ಪ್ರವಾಸೋದ್ಯಮ ಸಚಿವ ಜ್ಯೋತಿಪ್ರಕಾಶ್‌ ಪಾಣಿಗ್ರಾಹಿ, ‘ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಒಡಿಶಾ ₹500 ಕೋಟಿ ವಿನಿಯೋಗಿಸುತ್ತಿದೆ. ಕಾಶ್ಮೀರಕ್ಕಿಂತ ಸುಂದರವಾಗಿರುವ ನಮ್ಮ ರಾಜ್ಯದಲ್ಲಿರುವ ಅವಕಾಶಗಳನ್ನು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳ ಹೂಡಿಕೆದಾರರು ಬಳಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ರಾಜಧಾನಿ ಭುವನೇಶ್ವರ ದೇಶದ ಪ್ರಮುಖ ಸ್ಮಾರ್ಟ್‌ಸಿಟಿಗಳಲ್ಲಿ ಒಂದಾಗಿದೆ. ದೇಗುಲಗಳ ನಗರಿಯಾಗಿರುವ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿವೆ. ರಾಜ್ಯದ ತಲ್ಸಾರಿ, ಉದಯಪುರ ಮತ್ತು ಚಂದನೇಶ್ವರಗಳಲ್ಲಿ ರಸ್ತೆ ಮತ್ತು ಹೋಟೆಲ್‌ಗಳನ್ನು ನಿರ್ಮಿಸಲು ₹100 ಕೋಟಿ ವಿನಿಯೋಗಿಸುತ್ತಿದೆ’ ಎಂದರು.

ADVERTISEMENT

‘ಒಡಿಶಾದ ಬುಡಕಟ್ಟು ಸಮುದಾಯ ವಿಶಿಷ್ಟ ಸಂಪ್ರದಾಯ ಹೊಂದಿದೆ. ಪ್ರವಾಸೋದ್ಯಮಕ್ಕೆ ಈ ಅಂಶವನ್ನು ಬಳಸಿಕೊಳ್ಳಲಾಗುತ್ತದೆಯಾದರೂ, ಆ ಸಮುದಾಯದ ಹಿತವನ್ನು ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದರು.

ಒಡಿಶಾ ಪ್ರವಾಸೋದ್ಯಮ ಇಲಾಖೆಯ ಆಯುಕ್ತ ವಿಶಾಲ್‌ಕುಮಾರ್‌ ದೇವ್‌, ಪರಿಸರ ಸ್ನೇಹಿ, ಬುಡಕಟ್ಟು ಹಾಗೂ ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳ ಕುರಿತು ವಿವರಿಸಿದರು.

***

ಉಭಯ ರಾಜ್ಯಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಸಿ.ಟಿ. ರವಿಯೊಂದಿಗೆ ಚರ್ಚೆ ನಡೆಸಲಾಯಿತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ
–ಜ್ಯೋತಿಪ್ರಕಾಶ್‌ ಪಾಣಿಗ್ರಾಹಿ,ಒಡಿಶಾ ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.