ADVERTISEMENT

ಇಂದಿರಾ ಕ್ಯಾಂಟೀನ್‌ ಊಟ ದುಬಾರಿ?

ಪ್ರತಿಪಕ್ಷಗಳಿಂದ ವಿರೋಧ l ಇನ್ನೂ ಕಡಿಮೆ ದರಕ್ಕೆ ಊಟ–ಉಪಾಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 20:13 IST
Last Updated 29 ಫೆಬ್ರುವರಿ 2020, 20:13 IST
ಇಂದಿರಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್   

ಬೆಂಗಳೂರು:‘ಇಂದಿರಾ ಕ್ಯಾಂಟೀನ್‌ನ ಉಪಾಹಾರ ಮತ್ತು ಊಟದ ದರ ಏರಿಸಬೇಕು ಎಂದು ಪಾಲಿಕೆ ಆಯುಕ್ತರು ಮೌಖಿಕವಾಗಿ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಇನ್ನೂ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಉಪಾಹಾರದ ದರವನ್ನು ₹5ರಿಂದ ₹10ಕ್ಕೆ, ಊಟದ ದರವನ್ನು ₹10ರಿಂದ ₹15ಕ್ಕೆ ಏರಿಸಲು ಪಾಲಿಕೆ ಚಿಂತನೆ ನಡೆಸುತ್ತಿದೆ.

ಆಕ್ರೋಶ:ದರ ಏರಿಕೆಗೆ ಚಿಂತನೆ ನಡೆಸುತ್ತಿರುವ ಪಾಲಿಕೆ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿವೆ.

ADVERTISEMENT

‘ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯ 1.70 ಲಕ್ಷ ಜನ ಊಟ ಹಾಗೂ ಉಪಾಹಾರ ಸೇವಿಸುತ್ತಿದ್ದಾರೆ. ಮುಖ್ಯವಾಗಿ, ಬಡವರು, ಕಾರ್ಮಿಕರು, ಆಟೊ ಚಾಲಕರಿಗೆ ಕ್ಯಾಂಟೀನ್‌ನಿಂದ ಅನುಕೂಲವಾಗಿದೆ. ಈಗ ದರ ಏರಿಕೆ ಮಾಡಿದರೆ, ಜನ ಸಹಜವಾಗಿ ಬೇರೆ ಕ್ಯಾಂಟೀನ್‌ಗಳಿಗೆ ಹೋಗುತ್ತಾರೆ. ಆಗ ಇಂದಿರಾ ಕ್ಯಾಂಟೀನ್‌ ಮುಚ್ಚಬೇಕಾಗುತ್ತದೆ. ಪಾಲಿಕೆಯ ಆಡಳಿತ ನಡೆಸುತ್ತಿರುವ ಬಿಜೆಪಿಯ ಉದ್ದೇಶವೂ ಇದೇ ಆಗಿದ್ದು, ಕ್ಯಾಂಟೀನ್‌ಗಳನ್ನು ಮುಚ್ಚಲು ಈ ಪ್ರಯತ್ನಕ್ಕೆ ಕೈ ಹಾಕುತ್ತಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ದೂರಿದರು.

‘12 ಸಾವಿರ ಕೋಟಿ ಬಜೆಟ್‌ ಗಾತ್ರ ಹೊಂದಿರುವ ಬಿಬಿಎಂಪಿಗೆ, ₹110 ಕೋಟಿಯನ್ನು ಇಂದಿರಾ ಕ್ಯಾಂಟೀನ್‌ಗೆ ಮೀಸಲಿಡುವುದು ಹೊರೆಯೇನೂ ಅಲ್ಲ. ಸರ್ಕಾರದ ನೆರವು ಸಿಗದಿದ್ದರೂ, ಕ್ಯಾಂಟೀನ್‌ ನಿರ್ವಹಣೆಗೆ ತೊಂದರೆಯೇನೂ ಆಗುವುದಿಲ್ಲ’ ಎಂದು ಅವರು ಹೇಳಿದರು.

‘ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಸುವ ಬೇರೆ ಕಂಪನಿಗಳಿಗಿಂತಲೂ ಅದಮ್ಯ ಚೇತನ ಸಂಸ್ಥೆಯು ₹2 ಕಡಿಮೆ ನಮೂದಿಸಿದೆ. ಹೀಗಿದ್ದಾಗ, ಪಾಲಿಕೆಯು ಊಟ, ಉಪಾಹಾರದ ದರವನ್ನು ಇನ್ನೂ ಕಡಿಮೆ ಮಾಡಬೇಕೇ ವಿನಾ ಏರಿಸಿ ಬಾರದು’ ಎಂದು ಹೇಳಿದರು.

‘ಮುಂದಿನ ಸಭೆಯಲ್ಲಿ ಪಾಲಿಕೆಯ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಲಾಗುವುದು. ಯಾವುದೇ ಕಾರಣಕ್ಕೂ ದರ ಏರಿಕೆಗೆ ಅವಕಾಶ ನೀಡುವುದಿಲ್ಲ’ ಎಂದು ಅವರು ಹೇಳಿದರು.

ಪ್ರಸ್ತುತ ಷೆಫ್‌ಟಾಕ್‌ ಮತ್ತು ರಿವಾರ್ಡ್‌ ಸಂಸ್ಥೆಗಳು ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿವೆ. ಅವುಗಳ ಟೆಂಡರ್‌ ಅವಧಿ 2019ರ ಆಗಸ್ಟ್‌ನಲ್ಲೇ ಮುಕ್ತಾಯವಾಗಿತ್ತು. ಆ ಬಳಿಕ ಪಾಲಿಕೆ ಕೋರಿಕೆ ಮೇರೆಗೆ ಈ ಕಂಪನಿಗಳೇ ಕ್ಯಾಂಟೀನ್‌ಗಳನ್ನು ನಿರ್ವಹಿಸುತ್ತಿವೆ.

**

ಇಂದಿರಾ ಕ್ಯಾಂಟೀನ್‌ ಊಟ, ಉಪಾಹಾರದ ದರ ಏರಿಕೆ ಕುರಿತು ಲಿಖಿತ ಪ‍್ರಸ್ತಾವ ಸಲ್ಲಿಸಿಲ್ಲ. ಮೌಖಿಕವಾಗಿ ಕೋರಲಾಗಿದೆ.
-ಬಿ.ಎಚ್. ಅನಿಲ್‌ಕುಮಾರ್‌, ಪಾಲಿಕೆ ಆಯುಕ್ತ

**

ಆರ್ಥಿಕ ಹೊರೆ ನೆಪ ಬದಿಗಿಟ್ಟು, ಉತ್ತಮ ಗುಣಮಟ್ಟದ ಆಹಾರವನ್ನು ಬಿಬಿಎಂಪಿ ಪೂರೈಸಬೇಕು. ದರ ಏರಿಸಬಾರದು.
-ಜಗದೀಶ್‌ ಸದಂ, ಆಮ್‌ ಆದ್ಮಿ ಪಕ್ಷದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.