ADVERTISEMENT

ಎಂಟು ಚಾಲಕರು ವಶಕ್ಕೆ; ಠಾಣೆ ಎದುರು ಪ್ರತಿಭಟನೆ

ಓಲಾ ಕ್ಯಾಬ್– ಕಾರು ನಡುವೆ ಅಪಘಾತ; ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಸಹೋದರನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 20:07 IST
Last Updated 20 ಏಪ್ರಿಲ್ 2019, 20:07 IST

ಬೆಂಗಳೂರು: ಓಲಾ ಕ್ಯಾಬ್ ಹಾಗೂ ಕಾರಿನ ನಡುವೆ ಸಂಭವಿಸಿದ್ದ ಅಪಘಾತದ ವೇಳೆ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಸಹೋದರನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಎಂಟು ಚಾಲಕರನ್ನು ಬೆಳ್ಳಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದನ್ನು ಖಂಡಿಸಿ ನೂರಕ್ಕೂ ಹೆಚ್ಚು ಚಾಲಕರು ಠಾಣೆ ಎದುರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.

‘ಘಟನೆಯಲ್ಲಿ ಚಾಲಕರದ್ದು ಯಾವುದೇ ತಪ್ಪಿಲ್ಲ. ಯುವತಿಯೇ ಜಗಳ ತೆಗೆದು ಚಾಲಕರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ನಿಜಾಂಶ ಅರಿಯದೆ ಪೊಲೀಸರು ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ಠಾಣೆ ಬಿಟ್ಟು ಹೋಗುವುದಿಲ್ಲ’ ಎಂದು ಚಾಲಕರು ಪಟ್ಟು ಹಿಡಿದರು.

‘ಠಾಣೆಯ ಎಎಸ್‌ಐ ಮಂಜುನಾಥ್, ಚಾಲಕರ ಮೇಲೆ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ’ ಎಂದು ಒತ್ತಾಯಿಸಿದರು.

ADVERTISEMENT

ಪೊಲೀಸರು, ‘ಎರಡೂ ಕಡೆಯಿಂದಲೂ ಹೇಳಿಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಯಾರದ್ದು ತಪ್ಪು ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಕೂಡಲೇ ಪ್ರತಿಭಟನೆ ಅಂತ್ಯಗೊಳಿಸಿ ತನಿಖೆಗೆ ಸಹಕರಿಸಿ’ ಎಂದು ಕೋರಿದರು. ಅದಕ್ಕೆ ಒಪ್ಪಿದ ಚಾಲಕರು, ಪ್ರತಿಭಟನೆ ಕೈಬಿಟ್ಟರು.

ಆಗಿದ್ದೇನು?‘ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ಓಲಾ ಕ್ಯಾಬ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಇಬ್ಬರೂ ಚಾಲಕರ ನಡುವೆ ಗಲಾಟೆ ಶುರುವಾಗಿತ್ತು. ಕಾರಿನಲ್ಲಿ ಸಹೋದರನ ಜೊತೆಗಿದ್ದ ಯುವತಿ, ಮಧ್ಯಪ್ರವೇಶಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಕ್ಯಾಬ್‌ಗೆ ಹಾನಿಯಾಗಿದ್ದು, ದುರಸ್ತಿಗೆ ₹25 ಸಾವಿರ ಕೊಡುವಂತೆ’ ಕ್ಯಾಬ್ ಚಾಲಕ ಒತ್ತಾಯಿಸಿದ್ದರು. ಅದಕ್ಕೆ ಯುವತಿ ಒಪ್ಪಿರಲಿಲ್ಲ. ಅಷ್ಟರಲ್ಲೇ ರಸ್ತೆಯಲ್ಲಿ ಹೊರಟಿದ್ದ ಕ್ಯಾಬ್‌ಗಳ ಚಾಲಕರೆಲ್ಲರೂ ಸ್ಥಳದಲ್ಲಿ ಸೇರಿದ್ದರು. ಚಾಲಕನ ಪರವಾಗಿ ಯುವತಿ ಹಾಗೂ ಆಕೆಯ ಸಹೋದರನ ಜೊತೆಗೆ ಜಗಳ ತೆಗೆದಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನೊಂದ ಯುವತಿ, ಠಾಣೆಗೆ ಬಂದು ದೂರು ನೀಡಿದ್ದರು’ ಎಂದರು.

‘ಯುವತಿಯ ಹೇಳಿಕೆ ಆಧರಿಸಿ ಸುರೇಶ್, ಶಂಕರ್, ಲಿಂಗಣ್ಣಗೌಡ ಸೇರಿದಂತೆ ಎಂಟು ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ. ‘ಮದ್ಯದ ಅಮಲಿನಲ್ಲಿದ್ದ ಯುವತಿಯೇ ನಮ್ಮ ಜೊತೆ ಜಗಳ ತೆಗೆದಿದ್ದಳು’ ಎಂದು ಚಾಲಕರು ಹೇಳುತ್ತಿದ್ದಾರೆ. ಎರಡೂ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.