ADVERTISEMENT

10ರಂದು ಪ‍ರಿಶಿಷ್ಟ ಜಾತಿಗಳ ‘ಸಂಕಲ್ಪ ಸಮಾವೇಶ’

ಸದಾಶಿವ ಆಯೋಗ ವರದಿ ಗುಪ್ತವಾಗಿ ಕೇಂದ್ರಕ್ಕೆ ಶಿಪಾರಸು–ಆರೋಪ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 15:40 IST
Last Updated 7 ಜನವರಿ 2023, 15:40 IST

ಬೆಂಗಳೂರು: ಸರ್ಕಾರ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಜ. 10ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ಪರಿಶಿಷ್ಟ ಜಾತಿಗಳ ಸಂಕಲ್ಪ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಿಳಿಸಿದೆ.

‘ಎ.ಜೆ. ಸದಾಶಿವ ಆಯೋಗದ ವರದಿಯ ದೃಢೀಕೃತ ಪ್ರತಿಯನ್ನು 101 ಪರಿಶಿಷ್ಟ ಜಾತಿಗಳು, ಸಂಘಟನೆಗಳು ಮತ್ತು ಸಾರ್ವಜನಿಕರಿಗೆ ನೀಡಬೇಕು. ಬಾಧಿತ ಸಮುದಾಯಗಳ ಅಭಿಪ್ರಾಯ, ಲಿಖಿತ ಆಕ್ಷೇಪಣೆ, ತಕರಾರುಗಳನ್ನು ಸ್ವೀಕರಿಸಿ ಅಂತಹ ಸಮುದಾಯಗಳನ್ನು ವಿಚಾರಣೆಗೆ ಆಹ್ವಾನಿಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದ ಕುರಿತು ಸರ್ಕಾರ ಉಪಸಮಿತಿಯನ್ನು ರಚಿಸಿದೆ. ಆದರೆ ಈ ಜಾತಿಗಳನ್ನು ವರ್ಗೀಕರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದನ್ನು ಈ ಉಪಸಮಿತಿ ಗಮನಿಸಬೇಕು. ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳ ವರ್ಗೀಕರಣಕ್ಕೆ ಅವಕಾಶವಿಲ್ಲ. ಪರಿಶಿಷ್ಟರ ಶೈಕ್ಷಣಿಕ, ಔದ್ಯೋಗಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಅಗತ್ಯ ಪ್ರಸ್ತಾವನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪರಿಶಿಷ್ಟರ ಮನೆ ಮನೆಗೆ ತೆರಳಿ ಸಮೀಕ್ಷೆ, ಇಲಾಖಾವಾರು ಮಾಹಿತಿ ಮತ್ತು ಅವಲೋಕನದ ವಸ್ತುನಿಷ್ಠ ಅಧ್ಯಯನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದರು.

‘ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಯ ವಾಸ್ತವವನ್ನು ಅರಿಯಲು ಕಾಂತರಾಜು ಆಯೋಗದ ಜಾತಿವಾರು ಜನಗಣತಿಯ ವರದಿಯನ್ನು ಈ ಕೂಡಲೇ ಪ್ರಕಟಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು, ಈ ಪ್ರಮಾಣಪತ್ರಗಳನ್ನು ನೀಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒಕ್ಕೂಟದ ಅಧ್ಯಕ್ಷ ರವಿ.ಎಚ್. ಮಾಕಳಿ ಹೇಳಿದರು.

ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಅಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್ ‘ಭೋವಿ, ಲಂಬಾಣಿ, ಛಲವಾದಿ ಸೇರಿ ಅಲೆಮಾರಿ ಸಮುದಾಯಗಳು ಸ್ಪೃಶ್ಯ ಜಾತಿಗಳಾಗಿವೆ ಎಂದು ಕೆಲವರು ಅವುಗಳನ್ನು ಈ ಮೀಸಲಾತಿ ಸೌಲಭ್ಯದಿಂದ ತೆಗೆಯಬೇಕೆಂಬ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಸರ್ಕಾರ 101 ಪರಿಶಿಷ್ಟ ಜಾತಿಗಳ ಜನಸಂಖ್ಯೆ ಆಧಾರಿತ ಅಂಕಿ–ಸಂಖ್ಯೆಗಳನ್ನು ನೀಡಬೇಕು. ನಂತರ ಒಳಮೀಸಲಾತಿಯ ನೀಡುವ ಕುರಿತು ಚರ್ಚಿಸಲಿ’ ಎಂದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಅನಂತನಾಯ್ಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.