ADVERTISEMENT

ಗೌಪ್ಯ ಬಾಕ್ಸ್‌ನಲ್ಲಿ ₹ 1 ಕೋಟಿ ಮೌಲ್ಯದ ಗಾಂಜಾ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 16:34 IST
Last Updated 23 ಜುಲೈ 2022, 16:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹೀಂದ್ರಾ ಬೊಲೆರೊ ವಾಹನದ ಕೆಳಭಾಗದಲ್ಲಿ ಗೌಪ್ಯ ಬಾಕ್ಸ್‌ ಮಾಡಿ ಗಾಂಜಾ ಬಚ್ಚಿಟ್ಟು ಸಾಗಿಸುತ್ತಿದ್ದ ಜಾಲ ಭೇದಿಸಿರುವ ಬೇಗೂರು ಠಾಣೆ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

‘ಕುಣಿಗಲ್ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನ ಕೆ.ಆರ್. ಅರವಿಂದ್ (26), ತಾವರೆಕೆರೆ ಅಂದಾನಪ್ಪ ಬಡಾವಣೆಯ ಪವನ್‌ಕುಮಾರ್ ಅಲಿಯಾಸ್ ಪಾಂಡು (27), ಮಂಗಳೂರು ಹೆಚ್ಕಲ್‌ನ ಅಮ್ಜದ್ ಇತಿಯಾರ್ ಅಲಿಯಾಸ್ ಇಮ್ರಾನ್ (27), ಬೀದರ್ ಜಿಲ್ಲೆಯ ಭಾಲ್ಕಿಯ ಪ್ರಭು (27), ದಕ್ಷಿಣ ಕನ್ನಡ ಜಿಲ್ಲೆಯ ನರಿಂಗಾಣದ ನಜೀಮ್ (26), ಆಂಧ್ರಪ್ರದೇಶದ ಪ್ರಸಾದ್ (24) ಹಾಗೂ ಪತ್ತಿ ಸಾಯಿ ಚಂದ್ರ ಪ್ರಕಾಶ್ (19) ಬಂಧಿತರು. ಇವರಿಂದ ₹ 1 ಕೋಟಿ ಮೌಲ್ಯದ 175 ಕೆ.ಜಿ 10 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಗೌಪ್ಯ ಬಾಕ್ಸ್‌ನಲ್ಲಿ ರಕ್ತಚಂದನದ ತುಂಡುಗಳನ್ನು ಸಾಗಿಸುವ ದೃಶ್ಯವಿದೆ. ಇದರಿಂದ ಪ್ರೇರಣೆಗೊಂಡಿದ್ದ ಆರೋಪಿಗಳು, ಮಹೀಂದ್ರಾ ಬೊಲೆರೊ ವಾಹನದ ಕೆಳಭಾಗದಲ್ಲಿ ಗೌಪ್ಯ ಬಾಕ್ಸ್ ಮಾಡಿಸಿ, ಗಾಂಜಾ ಸಾಗಣೆ ಮಾಡುತ್ತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದರು.

ADVERTISEMENT

ಬೀದರ್‌ನಲ್ಲಿ ಗಾಂಜಾ ಖರೀದಿ: ‘ಹಲವು ವರ್ಷಗಳಿಂದ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳು, ಕೆಲ ಪ್ರಕರಣಗಳಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಬೀದರ್‌ನಲ್ಲಿ ಗಾಂಜಾ ಖರೀದಿಸಿ ತರುತ್ತಿದ್ದ ಆರೋಪಿಗಳು, ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಬೇಗೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಾರುತ್ತಿದ್ದರು’ ಎಂದು ಪೊಲಿಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.