ADVERTISEMENT

ರಾಜಕಾಲುವೆ ಒತ್ತುವರಿ: ಒಂದು ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:00 IST
Last Updated 23 ಫೆಬ್ರುವರಿ 2023, 22:00 IST
   

ಬೆಂಗಳೂರು: ‘ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದ ಅಪರಾಧಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಸಿಎಂಎಂ ನ್ಯಾಯಾಲಯ ಆದೇಶಿಸಿದೆ’ ಎಂದು ಬಿಎಂಟಿಎಫ್ ಡಿವೈಎಸ್ಪಿ ಶ್ರೀಧರ್ ಪೂಜಾರಿ ತಿಳಿಸಿದ್ದಾರೆ.

ಬಿಬಿಎಂಪಿ ವಾರ್ಡ್ ನಂ.96 ಓಕಳಿಪುರಂ, 1ನೇ ಮುಖ್ಯರಸ್ತೆ, ಬಿಡಿಎ ನಿವೇಶನ ಸಂಖ್ಯೆ: 25 ರ ಮಾಲೀಕ ಮುದ್ದುಕೃಷ್ಣ ಟಿ.ಎಲ್. ಎಂಬುವವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದರು. ಬಿಎಂಟಿಎಫ್ ಪೊಲೀಸ್ ಠಾಣೆಯಲ್ಲಿ 2014ರ ಮೇ 30ರಂದು ಈ ಪ್ರಕರಣ ದಾಖಲಿಸಲಾಗಿತ್ತು.

ಸಾಕ್ಷ್ಯಾಧಾರ ಮತ್ತು ದಾಖಲಾತಿಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ಧ ಸಿ.ಎಂ.ಎಂ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣಾ ಕಾಲದಲ್ಲಿ ಆರೋಪಿಯು ರಾಜಕಾಲುವೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವುದು ದೃಢಪಟ್ಟಿತು. ಹೀಗಾಗಿ, 72 ವರ್ಷದ ಮುದ್ದುಕೃಷ್ಣ ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಫೆ.20ರಂದು ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.

ADVERTISEMENT

ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಸವಿತ ಹಾಗೂ ಸಿಬ್ಬಂದಿಯನ್ನು ಬಿಎಂಟಿಎಫ್‌ ಎಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಶ್ರೀಧರ ಪೂಜಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.