ADVERTISEMENT

ಆನ್‌ಲೈನ್ ಜೂಜು: ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 19:24 IST
Last Updated 28 ಅಕ್ಟೋಬರ್ 2021, 19:24 IST

ಬೆಂಗಳೂರು: ಆನ್‌ಲೈನ್ ಜೂಜು ನಿಯಂತ್ರಿಸುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ನ.9ಕ್ಕೆ ಮುಂದೂಡಿದೆ.

ಕೆಲ ಆಟಗಳು ಮತ್ತು ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಭರವಸೆ ನೀಡಿದ ಬಳಿಕ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ಮುಂದೂಡಿತು. ‘ತಿದ್ದುಪಡಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ತಡೆ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ಮಧ್ಯಂತರ ತಡೆ ನೀಡಿದರೆ ಪೊಲೀಸರ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಿವರಿಸಿದರು. ‘ಆನ್‌ಲೈನ್ ರಮ್ಮಿ ಒಂದು ಪಾರದರ್ಶಕ ಆಟವಾಗಿದೆ. ಪ್ರತಿಯೊಂದು ಪ್ರಕ್ರಿಯೆಯೂ ಡಿಜಿಟಲ್‌ನಲ್ಲಿ ದಾಖಲಾಗುತ್ತದೆ. ಷರತ್ತುಗಳನ್ನು ಪೂರೈಸದಿದ್ದರೆ ಆಟವಾಡಲು ಅವಕಾಶವೇ ಸಿಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಕರ್ನಾಟಕ ಪೊಲೀಸ್ ಕಾಯ್ದೆ –1963ಕ್ಕೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ, ಹಣ ಕಳೆದುಕೊಳ್ಳಬಹುದಾದ ಆನ್‌ಲೈನ್ ಆಟಗಳನ್ನು ನಿಷೇಧಿಸಿದೆ. ಇದನ್ನು ಪ್ರಶ್ನಿಸಿ ಅಖಿಲ ಭಾರತ ಗೇಮಿಂಗ್ ಫೆಡರೇಷನ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.