ADVERTISEMENT

ಉಪನಗರ ರೈಲಿಗಾಗಿ ಆನ್‌ಲೈನ್ ಸಹಿ ಸಂಗ್ರಹ

ವಿಮಾನ ನಿಲ್ದಾಣ ಮಾರ್ಗಕ್ಕೆ ಮೊದಲ ಆದ್ಯತೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 17:07 IST
Last Updated 19 ಜನವರಿ 2022, 17:07 IST
ರಾಜಕುಮಾರ್‌ ದುಗರ್‌
ರಾಜಕುಮಾರ್‌ ದುಗರ್‌   

ಬೆಂಗಳೂರು: ಉಪನಗರ ರೈಲು ಯೋಜನೆ ತ್ವರಿತ ಅನುಷ್ಠಾನ ಮತ್ತು ವಿಮಾನ ನಿಲ್ದಾಣದ ಮಾರ್ಗದ ಕಾರಿಡಾರ್‌ಗೆ ಮೊದಲ ಆದ್ಯತೆ ನೀಡಲು ಒತ್ತಾಯಿಸಿ ರೈಲ್ವೆ ಹೋರಾಟಗಾರರು ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಉಪನಗರ ರೈಲು ಯೋಜನೆಯನ್ನು ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಹೋರಾಟಗಾರ ರಾಜಕುಮಾರ್ ದುಗಾರ್ ಅವರು ಚೇಂಜ್‌ ಆರ್ಗ್‌ನಲ್ಲಿ ಆರಂಭಿಸಿರುವ ಅಭಿಯಾನಕ್ಕೆ ಎರಡೇ ದಿನಗಳಲ್ಲಿ 1,459 ಜನ ಸಹಿ ಹಾಕಿದ್ದಾರೆ.

ಯೋಜನೆಗೆ ಅನುಮೋದನೆ ದೊರೆತು ಒಂದೂವರೆ ವರ್ಷವೇ ಕಳೆದಿದೆ. ಒಂದೇ ಒಂದು ಇಟ್ಟಿಗೆಯನ್ನೂ ಕೆ–ರೈಡ್ ಇಟ್ಟಿಲ್ಲ. ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಕೆ–ರೈಡ್ ತನ್ನ ಆದ್ಯತೆ ಬದಲಿಸಿದೆ. ಇದು ಸರಿಯಾದ ನಿರ್ಧಾರ ಅಲ್ಲ ಎಂದು ರಾಜಕುಮಾರ್ ದುಗಾರ್ ಹೇಳಿದರು.

ADVERTISEMENT

ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 1 ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಆರಂಭವಾದರೆ ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಹೆಬ್ಬಾಳ ಮೇಲ್ಸೇತುವೆ ದಾಟುವುದೇ ಕಷ್ಟವಾಗಲಿದೆ ಎಂದರು.

ಉಪನಗರ ರೈಲು ಯೋಜನೆಗೆ ಸರ್ಕಾರ ಆದ್ಯತೆ ನೀಡುವ ಬದಲು ಮೆಟ್ರೊ ರೈಲು ಮಾರ್ಗಕ್ಕೆ ಆದ್ಯತೆ ನೀಡಿದೆ. ಸಿಲ್ಕ್‌ ಬೋರ್ಡ್, ಹೊರ ವರ್ತುಲ ರಸ್ತೆ, ಕೆ.ಆರ್‌.ಪುರ ಮಾರ್ಗದಿಂದ ಹೆಬ್ಬಾಳಕ್ಕೆ ಬಂದು ಹೋಗುವ ಮೆಟ್ರೊ ರೈಲು ಮಾರ್ಗದಿಂದ ಪ್ರಯಾಣಿಕರಿಗೆ ಅಷ್ಟೇನು ಅನುಕೂಲ ಆಗಲಾರದು ಎಂದು ಅವರು ಅಭಿಪ್ರಾಯಪಟ್ಟರು.

ಉಪನಗರ ರೈಲು ಯೋಜನೆಯನ್ನು ಮೊದಲು ಆರಂಭಿಸಿದರೆ ಸಾಕಷ್ಟು ಅನುಕೂಲಗಳಿವೆ. ಅದನ್ನು ಅರ್ಥ ಮಾಡಿಕೊಳ್ಳದೆ ಸರ್ಕಾರ ಆದ್ಯತೆ ಬದಲಿಸಿದರೆ ಸಂಚಾರ ದಟ್ಟಣೆ ಸಮಸ್ಯೆ ಉಲ್ಬಣಿಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.