ADVERTISEMENT

ಆನ್‌ಲೈನ್‌ ಸಮೀಕ್ಷೆ: ಹೀಗಿದೆ ಹಾದಿ...

ಸಮೀಕ್ಷಕರಿಗೆ ಕಾಯದೆ ನಾಗರಿಕರೆ ವಿವರ ದಾಖಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
   

ಬೆಂಗಳೂರು: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗಾಗಿ ಸಮೀಕ್ಷಕರು ಮನೆಗೆ ಯಾವಾಗ ಬರುತ್ತಾರೆ ಎಂದು ಕಾಯಬೇಕಿಲ್ಲ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು, ಸಾರ್ವಜನಿಕರು ಸ್ವತಃ ತಾವೇ ಸಮೀಕ್ಷೆಯ ವಿವರಗಳನ್ನು ಆನ್‌ಲೈನ್‌ ಪೋರ್ಟಲ್‌ ಮೂಲಕ ದಾಖಲಿಸಲು ಅವಕಾಶ ಮಾಡಿಕೊಟ್ಟಿದೆ.

https://kscbcself declaration. karnataka.gov.in/ ಪೋರ್ಟಲ್‌ನಲ್ಲಿ ರಾಜ್ಯದ ನಿವಾಸಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಮ್ಮ ವಿವರಗಳನ್ನು ದಾಖಲಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಬ್ರೌಸರ್‌, ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ ಬ್ರೌಸರ್‌ನಲ್ಲಿ ಈ ಪೋರ್ಟಲ್‌
ಕಾರ್ಯ ನಿರ್ವಹಿಸಲಿದೆ.

ಪೋರ್ಟಲ್‌ಗೆ ಭೇಟಿ ನೀಡಿದ ತಕ್ಷಣ ಸಮೀಕ್ಷಕರೆ ಅಥವಾ ನಾಗರಿಕರೆ ಎಂದು ಕೇಳಲಾಗುತ್ತದೆ. ಸಾರ್ವಜನಿಕರು ‘ನಾಗರಿಕ’ ಎಂಬುದನ್ನು ಆಯ್ಕೆ ಮಾಡಿ, ಮೊಬೈಲ್‌ ಸಂಖ್ಯೆ ನೀಡಬೇಕು. ಆನಂತರ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ನಮೂದಿಸಿ, ಪೋರ್ಟಲ್‌ಗೆ ಲಾಗಿನ್‌ ಆಗಬಹುದು. ಅಲ್ಲಿಂದ ಸಮೀಕ್ಷೆ ಆರಂಭವಾಗಲಿದೆ.

ADVERTISEMENT

ನಾಗರಿಕರು ತಮ್ಮ ಮನೆಗೆ ನೀಡಿರುವ ಯುಎಚ್‌ಐಡಿ ಸಂಖ್ಯೆಯನ್ನು ನಮೂದಿಸಬೇಕು. ಸಮೀಕ್ಷೆಯ ಮೊದಲ ಹಂತದಲ್ಲಿ ಎಸ್ಕಾಂಗಳ ಮೀಟರ್‌ ರೀಡರ್‌ಗಳು ಒಂದು ಚೀಟಿ ಅಂಟಿಸಿರುತ್ತಾರೆ. ಅದರಲ್ಲಿ ಯುಎಚ್‌ಐಡಿ ಸಂಖ್ಯೆ ಇರುತ್ತದೆ. ಒಂದೊಮ್ಮೆ ಮೀಟರ್‌ ರೀಡರ್‌ಗಳು ಸಮೀಕ್ಷೆಯ ಸ್ಟಿಕ್ಕರ್ ಅಂಟಿಸದೇ ಇದ್ದರೆ, ಚಿಂತಿಸುವ ಅಗತ್ಯವಿಲ್ಲ. ಮನೆಯ ವಿದ್ಯುತ್ ಮೀಟರ್‌ನ ಖಾತೆ ಸಂಖ್ಯೆ (ಆರ್‌.ಆರ್‌. ಸಂಖ್ಯೆ ಅಲ್ಲ) ನಮೂದಿಸಿ, ಸಮೀಕ್ಷೆ ಮುಂದುವರೆಸಬಹುದು. ಮೊದಲ ಹಂತದಲ್ಲಿ ಸಮೀಕ್ಷೆಯಿಂದ ಬಿಟ್ಟುಹೋದ ಮನೆಗಳಲ್ಲಿ ವಾಸಿಸುತ್ತಿರುವವರೂ ತಮ್ಮ ವಿವರ ದಾಖಲಿಸಲು ಇದರಿಂದ ಸಾಧ್ಯವಾಗಲಿದೆ.

ಆನಂತರ, ನಾಗರಿಕರು ತಮ್ಮ ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿಯ ಸಂಖ್ಯೆ ನಮೂದಿಸಬೇಕು. ಅವುಗಳೊಟ್ಟಿಗೆ ಇರುವ ಕುಟುಂಬದ ಸದಸ್ಯರ ವಿವರಗಳನ್ನು ದಾಖಲಿಸಬೇಕು. ಪಡಿತರ ಚೀಟಿಯಲ್ಲಿ ಕುಟುಂಬದ ಸದಸ್ಯರ ಹೆಸರು ಇಲ್ಲದೇ ಇದ್ದರೆ, ಅವರ ಆಧಾರ್ ಸಂಖ್ಯೆ ನಮೂದಿಸಿ ಅವರ ಹೆಸರನ್ನೂ ಸೇರಿಸಬಹುದು.

ಈ ಹಂತದಲ್ಲಿ ಕುಟುಂಬದ ಮುಖ್ಯಸ್ಥನ ಇ–ಕೆವೈಸಿ ದೃಢೀಕರಣ ಮಾಡಬೇಕು. ಇದಕ್ಕಾಗಿ ಆಧಾರ್ ಜತೆಗೆ ಜೋಡಣೆಯಾಗಿರುವ ಮೊಬೈಲ್‌ ಸಂಖ್ಯೆ ನಮೂದಿಸಿದರೆ, ಒಟಿಪಿ ಬರಲಿದೆ. ಒಟಿಪಿ ನಮೂದಿಸಿದ ನಂತರ ಇ–ಕೆವೈಸಿ ದೃಢೀಕರಣ ಮುಗಿಯಲಿದೆ.

ಹೀಗೆ ಹೆಸರುಗಳನ್ನು ಸೇರಿಸಿದ ನಂತರ ಧರ್ಮ, ಜಾತಿ, ಉಪಜಾತಿ, ಶೈಕ್ಷಣಿಕ, ಔದ್ಯೋಗಿಕ, ಆದಾಯ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರ ದಾಖಲಿಸಬೇಕು. ಎಲ್ಲವೂ ಪೂರ್ಣಗೊಂಡ ನಂತರ, ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಮಾಹಿತಿ ಖಚಿತಪಡಿಸಿಕೊಂಡ ನಂತರ ‘ಸಲ್ಲಿಸಿ’ ಆಯ್ಕೆ ಮಾಡಿಕೊಂಡರೆ ವಿವರ ದಾಖಲೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 

ಕೊನೆಯ ಹಂತದಲ್ಲಿ ನಾಗರಿಕರು ಸ್ವಯಂ ಘೋಷಣಾ ಪತ್ರ ಅಪ್‌ಲೋಡ್‌ ಮಾಡಬೇಕು. ಒಂದು ಬಿಳಿ ಹಾಳೆಯಲ್ಲಿ, ‘ನಾನು ಈ ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗಿ ಆಗಿದ್ದೇನೆ ಮತ್ತು ನೀಡಿರುವ ಎಲ್ಲ ಮಾಹಿತಿ ನಿಜ ಮತ್ತು ಸರಿಯಾಗಿದೆ’ ಎಂದು ಬರೆದು ಸಹಿ ಮಾಡಬೇಕು. ಅದನ್ನು ಫೋಟೊ ತೆಗೆದು, ಅಪ್‌ಲೋಡ್‌ ಮಾಡಬೇಕು. ಈ ಎಲ್ಲ ಪ್ರಕ್ರಿಯೆಯ ನಂತರ ‘ಸಮೀಕ್ಷೆ ಪೂರ್ಣಗೊಂಡಿದೆ’ ಎಂಬ ಸಂದೇಶ
ಬಿತ್ತರವಾಗಲಿದೆ. ಜತೆಗೆ ಸಮೀಕ್ಷಾ ಅರ್ಜಿಯ ಸಂಖ್ಯೆಯೂ ಗೋಚರವಾಗಲಿದೆ.

ಏನೆಲ್ಲಾ ತಯಾರಿ...

l  ಮನೆಯ ವಿದ್ಯುತ್‌ ಮೀಟರ್‌ನ ಖಾತೆ ಸಂಖ್ಯೆ. ಪಡಿತರ ಚೀಟಿಯ ಸಂಖ್ಯೆ

l  ಆಧಾರ್ ಸಂಖ್ಯೆ ಮತ್ತು ಅದಕ್ಕೆ ಜೋಡಣೆ ಮಾಡಿರುವ ಮೊಬೈಲ್‌ ಸಂಖ್ಯೆ. ಮೊಬೈಲ್ ಸಂಖ್ಯೆಯು ಚಾಲ್ತಿಯಲ್ಲಿರಬೇಕು

l  ಕುಟುಂಬದ ಸದಸ್ಯರ ಶೈಕ್ಷಣಿಕ ಮತ್ತು ಆರ್ಥಿಕ ವಿವರ

l  ಆಧಾರ್‌ ಇ–ಕೆವೈಸಿ ದೃಢೀಕರಣ ಸಾಧ್ಯವಾಗದೇ ಇದ್ದರೆ, CEG Face KYC ಅಪ್ಲಿಕೇಷನ್‌ನ ಮೂಲಕ ಫೇಸ್‌ ಕೆವೈಸಿ ದೃಢೀಕರಣ ಮಾಡಬೇಕಾಗುತ್ತದೆ. ಸಮೀಕ್ಷೆ ಆರಂಭಿಸುವುದಕ್ಕೆ ಮುನ್ನವೇ ಈ ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಲ್ ಮಾಡಿಕೊಳ್ಳುವುದು ಸೂಕ್ತ

l  ಸ್ವಯಂಘೋಷಣಾ ಪತ್ರ ಬರೆಯಲು ಒಂದು ಬಿಳಿ ಹಾಳೆ ಮತ್ತು ಪೆನ್‌

l  ಮೊಬೈಲ್‌ ನೆಟ್‌ವರ್ಕ್‌ ಲಭ್ಯವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು

ತಾಂತ್ರಿಕ ತೊಂದರೆ


ಆನ್‌ಲೈನ್‌ನಲ್ಲಿ ಸಮೀಕ್ಷೆಗೆ ವಿವರ ದಾಖಲಿಸಲು ಮುಂದಾದ ನಾಗರಿಕರು ತಾಂತ್ರಿಕ ಸಮಸ್ಯೆ ಎದುರಿಸಿದ ಬಗ್ಗೆ ವರದಿಯಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಪೋರ್ಟಲ್‌ ತೆರೆದುಕೊಳ್ಳುತ್ತಿಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನು ಕೆಲವರು ಆಧಾರ್‌ ಇ–ಕೆವೈಸಿ ದೃಢೀಕರಣ ಕೊಟ್ಟರೆ, ತೆಗೆದುಕೊಳ್ಳುತ್ತಿಲ್ಲ. ಬದಲಿಗೆ ಹಿಂದಿನ ವಿಂಡೋಗೆ ಬಂದು ನಿಲ್ಲುತ್ತಿದೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.