ADVERTISEMENT

ಹೊಸ ನೀತಿಯಿಂದ ಸಮಗ್ರ ಕಲಿಕೆಗೆ ಇಂಬು: ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು ವಿವಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಆನ್‌ಲೈನ್‌ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 20:49 IST
Last Updated 25 ಆಗಸ್ಟ್ 2020, 20:49 IST

ಬೆಂಗಳೂರು: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ಕಲಿಕೆಗೆ ಇಂಬು ನೀಡಲಿದ್ದು, ವಿದ್ಯಾರ್ಥಿಗಳು ಆಸಕ್ತಿದಾಯಕ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನೆರವಾಗಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್
ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಐದು ದಿನಗಳ ಆನ್‌ಲೈನ್‌ ಕಾರ್ಯಾಗಾರದ ಎರಡನೇ ದಿನ ‘ಶಿಕ್ಷಣದಲ್ಲಿ ಪಠ್ಯ ಹಾಗೂ ರಚನಾತ್ಮಕ ಸುಧಾರಣೆ’ ವಿಷಯದ ಸಂವಾದದಲ್ಲಿ ಮಾತನಾಡಿದ ಅವರು, ‘ಈ ನೀತಿ ಪ್ರೇರಿತ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ಜ್ಞಾನಾರ್ಜನೆ, ತರ್ಕಬದ್ಧ ಆಲೋಚನೆ ಮತ್ತು ಸಾಮಾಜಿಕವಾದ ನೈಪುಣ್ಯವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಹೊಸ ದಿಕ್ಕು ತೋರಿಸಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್‌, ‘ಪದವಿ ಪಡೆಯುವುದು ಮುಖ್ಯವಲ್ಲ. ವಸ್ತುವಿಷಯಗಳ ಕೌಶಲ ತಿಳಿದುಕೊಂಡು ಗುಣಮಟ್ಟದ ಬದುಕು ನಡೆಸುವುದು ಮುಖ್ಯ. ಹೊಸ ನೀತಿ ಆ ನಿಟ್ಟಿನಲ್ಲಿ ದಾರಿ ತೋರಿಸಲಿದೆ’ ಎಂದರು.

ADVERTISEMENT

ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸೂರಪ್ಪ, ‘ಹೊಸ ನೀತಿಯಲ್ಲಿ ಉನ್ನತ ಶಿಕ್ಷಣಕ್ಕೆ ಸ್ವಾಯತ್ತತೆ ನೀಡಿರುವುದು ಉತ್ತಮ ಬೆಳವಣಿಗೆ’ ಎಂದರು. ರಾಷ್ಟ್ರೀಯ ಕಾನೂನು ಶಾಲೆಯ ವಿಶ್ರಾಂತ ಕುಲಪತಿ ಪ್ರೊ. ವೆಂಕಟರಾವ್, ‘ಹೊಸ ಶಿಕ್ಷಣ ಪದ್ಧತಿಯಿಂದ ಪ್ರತಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಸ್ವಾಯತ್ತತೆ ನೀಡುವ ಮೂಲಕ, ಭವಿಷ್ಯದಲ್ಲಿ ಈ ಸಂಸ್ಥೆಗಳು ಗುಣಾತ್ಮಕ ಪಠ್ಯಕ್ರಮ ರಚಿಸುವ ಜೊತೆಗೆ ಗುಣಮಟ್ಟದ ಸಂಶೋಧನೆಯನ್ನೂ ನಡೆಸಬಹುದು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ‘ಹೊಸ ನೀತಿಯಲ್ಲಿ ಪದವಿಯಲ್ಲಿ ಸಂಶೋಧನೆಗೆ ಒತ್ತು ಕೊಟ್ಟಿರುವುದು ಶ್ಲಾಘನೀಯ’ ಎಂದರು. ಐಎಸ್‌ಬಿಆರ್ ಸಂಸ್ಥೆಯ ನಿರ್ದೇಶಕಿ ಡಾ. ಮಾನಸ ನಾಗಭೂಷಣಂ, ಶಾಲೆಯ ಮಟ್ಟದಲ್ಲಿ ಪಠ್ಯಕ್ರಮ ಹೇಗಿರಬೇಕು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.