ADVERTISEMENT

ಬಿಎಂಟಿಸಿ; 24 ಎಲೆಕ್ಟ್ರಿಕ್‌ ಬಸ್‌ಗಳು ಮಾತ್ರ ಸಂಚಾರ

ಗುತ್ತಿಗೆ ಪಡೆದಿರುವ ಬಿಎಂಟಿಸಿ: ಪ್ರತಿ ಬಸ್‌ಗೆ ₹50 ಲಕ್ಷ ವೆಚ್ಚ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:23 IST
Last Updated 18 ಮಾರ್ಚ್ 2022, 21:23 IST
ಎಲೆಕ್ಟ್ರಿಕ್‌ ಬಸ್‌
ಎಲೆಕ್ಟ್ರಿಕ್‌ ಬಸ್‌   

ಬೆಂಗಳೂರು: ಬಿಎಂಟಿಸಿ ಗುತ್ತಿಗೆ ಪಡೆದಿರುವ 90 ಎಲೆಕ್ಟ್ರಿಕ್‌ ಬಸ್‌ಗಳಲ್ಲಿ 24 ಮಾತ್ರ ನಗರದಲ್ಲಿ ಸದ್ಯ ಸಂಚರಿಸುತ್ತಿವೆ.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಕೆ. ಗೋವಿಂದರಾಜ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ‘2021ರ ಡಿಸೆಂಬರ್‌ನಲ್ಲಿ ಸಂಸ್ಥೆಯು ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಗುತ್ತಿಗೆ ಆಧಾರದ ಮೇಲೆ ಈ ಬಸ್‌ಗಳನ್ನು ಪಡೆಯಲಾಗಿದೆ’ ಎಂದು ವಿವರಿಸಿದರು.

‘ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ ನಿಗಮ ಈ ಬಸ್‌ಗಳ ನಿರ್ವಹಣೆ ಕೈಗೊಂಡಿದೆ. ಉಳಿದ ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆಯನ್ನು ಹಂತ ಹಂತವಾಗಿ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

‘ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ಬಿಎಂಟಿಸಿಗೆ ಒಟ್ಟಾರೆ ₹50 ಕೋಟಿ ಅನುದಾನ ದೊರೆಯಲಿದೆ. ಈ ಅನುದಾನದಲ್ಲಿ ಪ್ರತಿ ಬಸ್‌ಗೆ ₹50 ಲಕ್ಷದಂತೆ 90 ಬಸ್‌ಗಳಿಗೆ ₹45 ಕೋಟಿಯನ್ನು ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರನಿಗಮಕ್ಕೆ ನೀಡಲಾಗುವುದು. ಉಳಿದ ಮೊತ್ತವನ್ನು ಚಾರ್ಜಿಂಗ್‌ ಸೇರಿದಂತೆ ಇತರ ಮೂಲಸೌಕರ್ಯಗಳನ್ನು ಕಲ್ಪಿಸಲು ಉಪಯೋಗಿಸಲಾಗುವುದು’ ಎಂದು ಹೇಳಿದರು.

‘ಬಿಎಂಟಿಸಿ ಯಾವುದೇ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಿಲ್ಲ. ಇನ್ನೂ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ಕೇಂದ್ರ ಸರ್ಕಾರದ ಫೇಮ್‌–2 ಯೋಜನೆ ಅಡಿಯಲ್ಲಿ ಅಶೋಕ್‌ ಲೆಲ್ಯಾಂಡ್‌ ಸ್ವಿಚ್‌ ಮೊಬಿಲಿಟಿ ಆಟೋಮೊಟಿವ್ ಲಿಮಿಟೆಡ್‌ ಮೂಲಕ ಗುತ್ತಿಗೆ ಪಡೆಯಲಾಗುವುದು’ ಎಂದು ಅವರು ತಿಳಿಸಿದರು.

‘ಚಾರ್ಜಿಂಗ್‌ ಪಾಯಿಂಟ್‌ಗಳೇ ಇಲ್ಲ’
‘ಪೂರ್ವ ಸಿದ್ಧತೆಯೇ ಇಲ್ಲದೆಯೇ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ನಗರದಲ್ಲಿ ಬಸ್‌ಗಳ ಸಂಖ್ಯೆಗೆ ತಕ್ಕಂತೆ ಚಾರ್ಜಿಂಗ್‌ ಪಾಯಿಂಟ್‌ಗಳೇ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ’ ಎಂದು ಗೋವಿಂದರಾಜ್‌ ದೂರಿದರು.

‘ಒಂದು ದಿನಕ್ಕೆ 80 ಕಿ.ಮೀ. ಮಾತ್ರ ಈ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಒಪ್ಪಂದದ ಅನ್ವಯ 180 ಕಿ.ಮೀ. ಸಂಚರಿಸಬೇಕು. ಜತೆಗೆ, 90 ಬಸ್‌ಗಳಿಗೆ ಹಣ ಪಾವತಿಸಲಾಗುತ್ತಿದೆ. ಹೀಗಾಗಿ, ಇದರಲ್ಲಿ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.