ADVERTISEMENT

ಬಿಬಿಎಂಪಿ ಖಾತೆಯಲ್ಲಿರುವುದು ಕೇವಲ ₹ 68 ಕೋಟಿ!

ಬಾಕಿ ಹಣ ಬಿಡುಗಡೆ ಮಾಡುವಂತೆ ದುಂಬಾಲು ಬಿದ್ದ ಪಾಲಿಕೆ ಸದಸ್ಯರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 22:03 IST
Last Updated 10 ಆಗಸ್ಟ್ 2020, 22:03 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ವಾರ್ಡ್‌ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ, ವೈದ್ಯಕೀಯ ವೆಚ್ಚ ಮರುಪಾವತಿಗೆ ಹಣ ಬಿಡುಗಡೆಯಾಗಿಲ್ಲ, ಒಂಟಿ ಮನೆ ಹಾಗೂ ಇತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಬಾಕಿ ಇದೆ, ಬಡವರ ವೈದ್ಯಕೀಯ ವೆಚ್ಚದ ಸಂಬಂಧಿಸಿದ ಬಿಲ್‌ ಪಾವತಿಗೆ ವಲಯಗಳಿಗೆ ಅನುದಾನ ತಲುಪಿಲ್ಲ....

ಪಾಲಿಕೆಯ ಈಗಿನ ಕೌನ್ಸಿಲ್‌ ಅವಧಿ ಇನ್ನೇನು 30 ದಿನ ಉಳಿದಿರುವಂತೆಯೇ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಮೇಯರ್‌ ಎಂ.ಗೌತಮ್‌ ಕುಮಾರ್‌ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರ ಬಳಿ ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ‘ನೀವು ಅನುದಾನ ಬಿಡುಗಡೆಗೆ ಬೇಡಿಕೆ ಸಲ್ಲಿಸುತ್ತಲೇ ಇದ್ದೀರಿ. ಆದರೆ, ಪಾಲಿಕೆ ಖಾತೆಯಲ್ಲಿ ಇಂದು ಕೇವಲ ₹ 68 ಕೋಟಿ ಇದೆ. ಇದರಲ್ಲೇ ಕಸ ನಿರ್ವಹಣೆ ಆಗಬೇಕು, ಸಿಬ್ಬಂದಿಗೆ ಸಂಬಳ ಪಾವತಿ ಆಗಬೇಕು. ಆದ್ಯತೆಗಳನ್ನು ನೋಡಿಕೊಂಡು ಬಾಕಿ ಅನುದಾನ ಬಿಡುಗಡೆ ಮಾಡಲಾಗುತ್ತದೆ’ ಎಂದರು.

ADVERTISEMENT

ವೈದ್ಯಕೀಯ ವೆಚ್ಚ ಮರುಪಾವತಿಯ ವಸ್ತುಸ್ಥಿತಿ ವಿವರಿಸಿದ ಮೇಯರ್‌, ‘ಒಟ್ಟು ₹ 30 ಕೋಟಿಗಳಷ್ಟು ವೈದ್ಯಕೀಯ ವೆಚ್ಚ ಮರುಪಾವತಿಗೆ ಬೇಡಿಕೆ ಸಲ್ಲಿಸಲಾಗಿದೆ. ಸದ್ಯ ಇದಕ್ಕೆ ಲಭ್ಯ ಇರುವ ಹಣ ₹ 3.5 ಕೋಟಿ. ಯಾವೆಲ್ಲ ಪ್ರಕರಣಗಳಿಗೆ ನಿಜಕ್ಕೂ ತುರ್ತಾಗಿ ವೆಚ್ಚ ಮರುಪಾವತಿ ಮಾಡಬೇಕು ಎಂಬುದನ್ನು ನೋಡಿಕೊಂಡು ಹಣ ಬಿಡುಗಡೆ ಮಾಡುವಂತೆ ಮುಖ್ಯ ಲೆಕ್ಕಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದರು.

ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌, ‘ಪಾಲಿಕೆ ಅರ್ಥಿಕ ಸಂಕಷ್ಟ ಎದುರಿಸುತ್ತಿದೆ ಎನ್ನುತ್ತೀರಿ, ಪ್ರಯಾಣಿಕರ ತಂಗುದಾಣ ನಿರ್ಮಿಸುವ ಗುತ್ತಿಗೆ ಪಡೆದ ಸಂಸ್ಥೆಗಳು ಪಾಲಿಕೆಗೆ ತಿಂಗಳಿಗೆ ₹ 45 ಸಾವಿರ ನೆಲಬಾಡಿಗೆ ನೀಡಬೇಕು. ಇದುವರೆಗೆ ₹ 26 ಕೋಟಿ ವಸೂಲಿ ಮಾಡಬೇಕಾದ ಕಡೆ ಕೇವಲ ₹ 6 ಕೋಟಿ ವಸೂಲಿ ಮಾಡಲಾಗಿದೆ. ಗುತ್ತಿಗೆ ಪಡೆದ ಎರಡು ಸಂಸ್ಥೆಗಳು 1,650 ಬಸ್‌ನಿಲ್ದಾಣಗಳ ಬದಲು 642 ನಿಲ್ದಾಣಗಳನ್ನು ಮಾತ್ರ ನಿರ್ಮಿಸಿವೆ. ಮೊದಲು ಈ ಬಾಕಿ ವಸೂಲಿ ಮಾಡಿ’ ಎಂದರು.

‘ಬನ್ನೇರುಘಟ್ಟ ರಸ್ತೆಯ ಬಳಿ 10 ಎಕರೆ ಪಾಲಿಕೆ ಸ್ವತ್ತು ಒತ್ತುವರಿಯಾಗಿತ್ತು, ಪಾಲಿಕೆ ಹೆಸರಿಗೆ ಅದರ ಖಾತೆ ಮಾಡಿಸಲಾಗಿದೆ’ ಎಂದು ಮೇಯರ್‌ ತಿಳಿಸಿದರು.

ಕಸ ನಿರ್ವಹಣೆ ಸಮಿತಿ ಕೈಗೊಂಡಿದ್ದ ನಿರ್ಣಯದಂತೆ 45 ವಾರ್ಡ್‌ಗಳಲ್ಲಿ ಈ ಹಿಂದೆ ಅಂತಿಮಗೊಂಡ ಟೆಂಡರ್‌ ಪ್ರಕಾರ ಗುತ್ತಿಗೆದಾರರಿಗೆ ಕಾರ್ಯದೇಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.