ADVERTISEMENT

ಪ್ರಾಮಾಣಿಕರಿಗೆ ಮಾತ್ರ ಧೈರ್ಯ: ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 21:18 IST
Last Updated 20 ಆಗಸ್ಟ್ 2022, 21:18 IST
ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ರಾಜ್ಯಸಭಾ ಸದಸ್ಯ, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ‘ಜಸ್ಟಿಸ್ ಫಾರ್ ದಿ ಜಡ್ಜ್’ ಕೃತಿಯ ಚರ್ಚಾ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್, ಪ್ರೊ.ಎಸ್‌.ಎಂ.ಜಯಕರ, ಪ್ರೊ.ಕೊಟ್ರೇಶ್, ಪ್ರೊ.ಸುರೇಶ್ ವಿ. ನಾಡಗೌಡರ ಕೃತಿ ಪ್ರದರ್ಶಿಸಿದರು
ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ರಾಜ್ಯಸಭಾ ಸದಸ್ಯ, ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ‘ಜಸ್ಟಿಸ್ ಫಾರ್ ದಿ ಜಡ್ಜ್’ ಕೃತಿಯ ಚರ್ಚಾ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್, ಪ್ರೊ.ಎಸ್‌.ಎಂ.ಜಯಕರ, ಪ್ರೊ.ಕೊಟ್ರೇಶ್, ಪ್ರೊ.ಸುರೇಶ್ ವಿ. ನಾಡಗೌಡರ ಕೃತಿ ಪ್ರದರ್ಶಿಸಿದರು   

ಬೆಂಗಳೂರು: ‘ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಇರುವವರಿಗೆ ಅಷ್ಟೇ ಧೈರ್ಯ, ಎದೆಗಾರಿಕೆ ಇರುತ್ತದೆ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ವತಿಯಿಂದ ಆಯೋಜಿಸಿದ್ದ ರಾಜ್ಯಸಭಾ ಸದಸ್ಯ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ‘ಜಸ್ಟಿಸ್ ಫಾರ್ ದಿ ಜಡ್ಜ್’ ಕೃತಿಯ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಂಜನ್ ಗೊಗೊಯಿ ಅವರು ಎಲ್ಲ ಒತ್ತಡಗಳನ್ನು ಸಮರ್ಥವಾಗಿ ಎದುರಿಸಿ, ಹಲವು ಐತಿಹಾಸಿಕ ಪ್ರಕರಣಗಳಲ್ಲಿ ಉತ್ತಮ ತೀರ್ಪುಗಳ ಮೂಲಕ ನ್ಯಾಯದಾನ ಮಾಡಿರುವುದು ಶ್ಲಾಘನೀಯ. ಬೆದರಿಕೆಗೆ ಅಳುಕದೆ ಧೈರ್ಯವಾಗಿ ನ್ಯಾಯ ಎತ್ತಿ ಹಿಡಿಯುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ’ ಎಂದರು.

ADVERTISEMENT

‘ಶುದ್ಧವಾಗಿದ್ದರೆ ಅದ್ಭುತ ಕೆಲಸ ಮಾಡಬಹುದು. ಭ್ರಷ್ಟಾಚಾರ ಉತ್ತಮ ಆಡಳಿತವನ್ನು ಕುಗ್ಗಿಸುವುದರ ಜೊತೆಗೆ ಅದು ಕ್ಯಾನ್ಸರ್‌ಗಿಂತಲೂ ಅಪಾಯಕಾರಿ’ ಎಂದು ತಿಳಿಸಿದರು.

ಬೆಂಗಳೂರು ವಿ.ವಿ ಕುಲಪತಿ ಪ್ರೊ.ಜಯಕರ ಮಾತನಾಡಿ, ಪ್ರಾಮಾಣಿಕತೆ ಹಾಗೂ ಧೈರ್ಯವಿದ್ದವರು ಆತ್ಮಚರಿತ್ರೆ ಸ್ಪಷ್ಟವಾಗಿ ಬರೆಯುತ್ತಾರೆ. ಈ ಪುಸ್ತಕ ಕಾನೂನು ವಿದ್ಯಾರ್ಥಿಗಳಿಗೆ, ವಕೀಲರಿಗೆ, ನ್ಯಾಯಾಧೀಶರಿಗೆ ಅನುಕೂಲ. ಪ್ರತಿಯೊಬ್ಬರೂ ಸ್ವಾರ್ಥರಹಿತವಾಗಿ ಕೆಲಸ ನಿರ್ವಹಿಸಿದರೆ ದೇಶವು ಪ್ರಗತಿ ಸಾಧಿಸಲಿದೆ ಎಂದರು.

‘ನ್ಯಾಯ ಚೌತಲ್ ಸಂಘಟನೆ’ಯ ಮುಖ್ಯಸ್ಥ ರಾಘವೇಂದ್ರ ಅವರು, ’ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳಿಗೆ ಲೆಕ್ಕಿಸದೇ ನಿಸ್ವಾರ್ಥ ತೀರ್ಪುಗಳನ್ನು ನೀಡುವುದು ಅಷ್ಟು ಸುಲಭದ ವಿಚಾರ ಅಲ್ಲ. ಅದನ್ನು ನ್ಯಾಯಮೂರ್ತಿಗಳು ಉತ್ತಮವಾಗಿ ತಮ್ಮ ನಾಯಕತ್ವದಲ್ಲಿ ನಿರ್ವಹಿಸಿರುವುದು ಶ್ಲಾಘನೀಯ‘ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಕೊಟ್ರೇಶ್, ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಸುರೇಶ್ ವಿ. ನಾಡಗೌಡರ, ಪ್ರೊ.ಎನ್‌.ದಶರಥ್, ಸಹ ಪ್ರಾಧ್ಯಾಪಕ ಡಾ.ಎನ್. ಸತೀಶ್‌ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.