ADVERTISEMENT

ಪೊಲೀಸ್ ಕುಟುಂಬದ ಮಕ್ಕಳಿಗೂ ಸಿಇಟಿಯಲ್ಲಿ ಅವಕಾಶ: ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 16:14 IST
Last Updated 20 ನವೆಂಬರ್ 2025, 16:14 IST
ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ತಂಡಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಟ್ರೋಫಿ ವಿತರಣೆ ಮಾಡಿದರು 
ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತ ತಂಡಕ್ಕೆ ಗೃಹ ಸಚಿವ ಜಿ.ಪರಮೇಶ್ವರ ಅವರು ಟ್ರೋಫಿ ವಿತರಣೆ ಮಾಡಿದರು    

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸಿದ್ದು, ಇದುವರೆಗೂ 180 ಜನ ಮೀಸಲಾತಿ ಪಡೆದುಕೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ನಗರದ ಆಡುಗೋಡಿ ಸಿಎಆರ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ‘ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2025’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ರೀಡಾ ಮೀಸಲಾತಿಯ ಸದ್ಬಳಕೆ ಮಾಡಿಕೊಂಡು 180 ಜನ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ನೇಮಕಾತಿ ಆಗಿದ್ದಾರೆ. ಅದೇ ರೀತಿ, ಪೊಲೀಸ್ ಕುಟುಂಬದಿಂದ ಬಂದ ಮಕ್ಕಳಿಗೆ ಸಿ.ಇ.ಟಿಯಲ್ಲೂ ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಕ್ರೀಡೆ ದೈಹಿಕವಾಗಿ ಮಾತ್ರವಲ್ಲದೇ, ಮಾನಸಿಕವಾಗಿಯೂ ನಮ್ಮನ್ನು ಹೆಚ್ಚು ಸದೃಢಗೊಳಿಸುತ್ತದೆ. ಜೀವನದ ಅನೇಕ ಸಂದರ್ಭಗಳಲ್ಲಿ ಸೋಲು–ಗೆಲುವುಗಳ ಅನುಭವಗಳು ಎದುರಾಗುತ್ತವೆ. ಸೋತಾಗ ನಿರಾಶೆ ಆಗುತ್ತದೆ. ಕ್ರೀಡೆಗಳು ಆತ್ಮಸ್ಥೈರ್ಯ ಹೆಚ್ಚಿಸುತ್ತದೆ’ ಎಂದು ಹೇಳಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.