ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ವಿರೋಧ

ತಜ್ಞರು, ಶಿಕ್ಷಣ ವಲಯದ ಪ್ರಮುಖರ ಜೊತೆ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 20:43 IST
Last Updated 8 ಆಗಸ್ಟ್ 2021, 20:43 IST

ಬೆಂಗಳೂರು: ‘ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಚರ್ಚೆ ನಡೆಸದೇ ಆದೇಶ ಹೊರಡಿಸಿರುವುದು ಸರ್ವಾಧಿಕಾರಿ ನಿಲುವು. ಒಕ್ಕೂಟ ತತ್ವಕ್ಕೆ ಮಾಡಿರುವ ಅವಮಾನ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ವಿಸ್ತೃತ ಚರ್ಚೆ ನಂತರವೇ ನೀತಿಯ ಅನುಷ್ಠಾನ ಕುರಿತು ತೀರ್ಮಾನಿಸಬೇಕು ಎಂದಿದ್ದಾರೆ.

'ಶಿಕ್ಷಣ ತಜ್ಞರು, ಉಪನ್ಯಾಸಕರು, ಹಿರಿಯರು ಮತ್ತು ವಿರೋಧ ಪಕ್ಷಗಳ ಮುಖಂಡರು ಈ ನೀತಿಯನ್ನು ತರಾತುರಿಯಲ್ಲಿ ಹೇರಬೇಡಿ ಎಂದಿದ್ದರು. ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ತೀರ್ಮಾನಿಸಿ ಎಂದು‌ ಹೇಳಿದ್ದೆವು. ಆ ರೀತಿ ಮಾಡದೆ, ನೀತಿ ಜಾರಿಗೊಳಿಸಿ ಆದೇಶಿಸಲಾಗಿದೆ. ಬಡವರ, ಮಧ್ಯಮ ವರ್ಗದವರ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸಿಗೆ ನೇರವಾಗಿ ಬೆಂಕಿ ಇಡುವ ಪ್ರಕ್ರಿಯೆಯ ಭಾಗವಾಗಿ ಈ ನೀತಿ ಜಾರಿಗೊಳಿಸಲಾಗುತ್ತಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

‘ಕನ್ನಡ ಭಾಷಾ ವಿಷಯವನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ, ಅಂದರೆ ಒಂದು ವರ್ಷ ಕಲಿಸುವುದಾಗಿ ಹಿಂದೆ ಹೇಳಿದ್ದರು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದ್ದರು. ಆದರೆ, ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟತೆ ಇಲ್ಲ. ಅನೇಕ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ, ನಿಧಾನಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಮುಚ್ಚಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಹೆಚ್ಚಿಸಲು, ಖಾಸಗಿಯವರಿಗೆ ವಿಪರೀತ ಹಣ ಮಾಡಲು ಬೇಕಾದ ವೇದಿಕೆಯನ್ನು ನೀತಿಯ ಮೂಲಕ ಸೃಷ್ಟಿಸಿಕೊಡಲು ಕೇಂದ್ರ- ರಾಜ್ಯ ಸರ್ಕಾರ ಹೊರಟಿವೆ’ ಎಂದು ದೂರಿದ್ದಾರೆ.

‘ಪಿಯುಸಿ ಮಟ್ಟದಲ್ಲಿ‌ ವಿಜ್ಞಾನ ಕಲಿತವರು ಇದುವರೆಗೆ ಬಿಎಸ್ಸಿ ಹೋಗಲು‌ ಮನಸ್ಸಾಗದಿದ್ದರೆ ಬಿ.ಕಾಂ ಅಥವಾ ಬಿಎಗೆ ಸೇರಬಹುದಿತ್ತು. ಈ ಆಯ್ಕೆಗಳು ರದ್ದಾಗುತ್ತವೆ ಎಂಬಂತೆ ಆದೇಶ ಹೊರಡಿಸಲಾಗಿದೆ. ಶಿಕ್ಷಣ, ಪಠ್ಯಕ್ರಮಗಳನ್ನು ನಿರ್ಧರಿಸುವ ಹಕ್ಕು ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳ ಅಧಿಕಾರಗಳನ್ನು ದಮನ ಮಾಡಿ ಕೇಂದ್ರದ ಬಿಜೆಪಿ ಸರ್ಕಾರವು ಈ ನೀತಿ ಜಾರಿಗೊಳಿಸಲು ಹೊರಟಿದೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.