ADVERTISEMENT

ಅಂಗಾಂಗ ದಾನ: ಸಾವಿನಲ್ಲೂ ಸಾರ್ಥಕತೆ ಕಂಡ ರೈತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 18:02 IST
Last Updated 11 ಆಗಸ್ಟ್ 2021, 18:02 IST

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮಿದುಳು ನಿಷ್ಕ್ರೀಯಗೊಂಡಿದ್ದ 43 ವರ್ಷದ ಬಿಡದಿಯ ರೈತರೊಬ್ಬರು ಆರು ಅಂಗಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ.

ನಂಜುಂಡಯ್ಯ ಎಂಬ ಹೆಸರಿನ ರೈತ ಅಂಗಾಂಗ ದಾನ ಮಾಡಿದ್ದು, ಅವರು ಜು.26ರಂದು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅವರನ್ನು ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ, ಅವರ ಮಿದುಳು ನಿಷ್ಕ್ರೀಯಗೊಂಡಿರುವುದನ್ನು ಖಚಿತಪಡಿಸಿದ ವೈದ್ಯರು, ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿದರು.

ಕುಟುಂಬದ ಸದಸ್ಯರ ಸಮ್ಮಿತಿಯ ಮೇರೆಗೆ ವೈದ್ಯರು ವ್ಯಕ್ತಿಯ ಶ್ವಾಸಕೋಶಗಳು, ಮೂತ್ರಪಿಂಡ, ಯಕೃತ್ತು, ಹೃದಯದ ಕವಾಟ, ಕಣ್ಣಿನ ಕಾರ್ನಿಯಾ ಹಾಗೂ ಚರ್ಮವನ್ನು ಜೀವ ಸಾರ್ಥಕತೆ ಯೋಜನೆಯಡಿ ಪಡೆದಿದ್ದಾರೆ. ಈ ಅಂಗಾಂಗಗಳನ್ನು ಹೆಸರು ನೋಂದಾಯಿಸಿಕೊಂಡು ಅಂಗಾಂಗ ಕಸಿಗೆ ಕಾಯುತ್ತಿರುವವರಿಗೆ ಒದಗಿಸಿ, ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ADVERTISEMENT

ಆಸ್ಪತ್ರೆಯ ಮುಖ್ಯ ನರರೋಗ ಶಸ್ತ್ರಚಿಕಿತ್ಸಕ ಡಾ.ಎನ್.ಕೆ. ವೆಂಕಟರಮಣ, ‘ವ್ಯಕ್ತಿಯ ಮಿದುಳಿಗೆ ತೀವ್ರವಾಗಿ ಗಾಯವಾಗಿದ್ದರಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕುಟುಂಬದ ಸದಸ್ಯರ ಸಹಕಾರದಿಂದ ಅಂಗಾಂಗ ದಾನ ಪ್ರಕ್ರಿಯೆ ನಡೆದಿದ್ದು, ಆರು ರೋಗಿಗಳಿಗೆ ಜೀವದಾನ ಸಿಕ್ಕಂತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.