ADVERTISEMENT

ಮುನ್ನೆಚ್ಚರಿಕೆಯೊಂದಿಗೆ ಅಂಗಾಂಗ ಕಸಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 21:24 IST
Last Updated 18 ಡಿಸೆಂಬರ್ 2020, 21:24 IST

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆ ಕಂಡ ಕಾರಣ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಮುಖ ಆಸ್ಪತ್ರೆಗಳು ಅಂಗಾಂಗ ಕಸಿ ನಡೆಸಲಾರಂಭಿಸಿವೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ 3 ಸಾವಿರಕ್ಕೂ ಅಧಿಕ ಮಂದಿ ಅಂಗಾಂಗಕ್ಕಾಗಿ ಜೀವಸಾರ್ಥಕತೆ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು, ಅಂಗಾಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಅಂಗಾಂಗ ದಾನದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದರು. ಇನ್ನೊಂದೆಡೆ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಆದ್ಯತೆ ನೀಡಿದ ಪರಿಣಾಮ ಅಂಗಾಂಗ ಕಸಿಗಳನ್ನು ಮುಂದೂಡಲಾಗಿತ್ತು.

ನಗರದ ಫೋರ್ಟಿಸ್, ನಾರಾಯಣ ಹೆಲ್ತ್, ಎಂ.ಎಸ್. ರಾಮಯ್ಯ, ಮಣಿಪಾಲ್, ಕೊಲಂಬಿಯಾ ಏಷ್ಯಾ, ಅಪೋಲೊ, ಸಕ್ರಾ ವರ್ಡ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಜೂನ್ ತಿಂಗಳ ಬಳಿಕ ಅಂಗಾಂಗ ಕಸಿ ಸೇರಿದಂತೆ ತುರ್ತಾಗಿ ಅಗತ್ಯವಲ್ಲದ ಕೆಲ ಶಸ್ತ್ರಚಿಕಿತ್ಸೆಗಳನ್ನು ಸ್ಥಗಿತ ಮಾಡಿದ್ದವು. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ಸೋಂಕಿತರಿಗೆ ಹಾಸಿಗೆಗಳ ಮೀಸಲು ನಿರ್ಬಂಧವನ್ನು ತೆರವುಗೊಳಿಸಿದ್ದರಿಂದ ಕೋವಿಡೇತರ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಆದ್ಯತೆ ದೊರೆತಿದೆ.

ADVERTISEMENT

‘ಸಾಂಕ್ರಾಮಿಕ ಕಾಯಿಲೆ ಇರುವ ಕಾರಣ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ ಅಂಗಾಂಗ ದಾನ ಹಾಗೂ ಕಸಿ ಅಷ್ಟಾಗಿ ನಡೆಯುತ್ತಿರಲಿಲ್ಲ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಇನ್ನು ಮುಂದೆ ಅಂಗಾಂಗ ದಾನ ಮಾಡುವವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಇದರಿಂದ ಕಸಿ ಕೂಡ ಹೆಚ್ಚಾಗಲಿದೆ’ ಎಂದು ಜೀವ ಸಾರ್ಥಕತೆ ಸೊಸೈಟಿಯ ಸಂಯೋಜಕಿ ಕೆ.ಯು. ಮಂಜುಳಾ ತಿಳಿಸಿದರು.

ಐವರಿಗೆ ಆಸರೆಯಾದ ಮಹಿಳೆ
ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆಯೇ ಮೃತಪಟ್ಟ 49 ವರ್ಷದ ಮಹಿಳೆಯೊಬ್ಬಳು ಅಂಗಾಂಗ ದಾನದ ಮೂಲಕ ಐವರಿಗೆ ಆಸರೆಯಾಗಿದ್ದಾರೆ. ಯಲಹಂಕದ ನಿವಾಸಿಯಾಗಿದ್ದ ಅವರು, ಡಿ.13ರಂದು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ತಲೆಗೆ ಬಲವಾಗಿ ಹೊಡೆತ ಬಿದ್ದಿದ್ದ ಕಾರಣ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದ ಸಂಪರ್ಕ ಕಲ್ಪಿಸಿ, ಚಿಕಿತ್ಸೆ ನೀಡಿದರೂ ಚೇತರಿಸಿಕೊಂಡಿರಲಿಲ್ಲ. ಮಹಿಳೆಯ ಮಿದುಳು ನಿಷ್ಕ್ರೀಯಗೊಂಡಿರುವುದನ್ನು ಖಚಿತಪಡಿಸಿದ ವೈದ್ಯರು, ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಬಗ್ಗೆ ವಿವರಿಸಿದರು.

ಕುಟುಂಬದ ಸದಸ್ಯರು ಸಮ್ಮತಿ ನೀಡಿದ ಬಳಿಕ ಬಿಜಿಎಸ್ ಆಸ್ಪತ್ರೆಗೆ ಯಕೃತ್ತು,ಅಪೋಲೊ ಆಸ್ಪತ್ರೆಗೆ ಎಡ ಮೂತ್ರಪಿಂಡ, ಜಯದೇವ ಆಸ್ಪತ್ರೆಗೆ ಹೃದಯ, ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು ರವಾನಿಸಿ, ಕಸಿಗಳನ್ನು ನಡೆಸಲಾಯಿತು. ಮಹಿಳೆಯ ಬಲ ಮೂತ್ರಪಿಂಡವನ್ನು ಆಸ್ಪತ್ರೆಯ ರೋಗಿಯೊಬ್ಬರಿಗೆ ಕಸಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.