ADVERTISEMENT

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಮರು ಪಡೆಯುವ ಕೇಂದ್ರ: ಶರಣ ಪ್ರಕಾಶ ಪಾಟೀಲ

₹1 ಕೋಟಿ ಅನುದಾನ ಮಂಜೂರು ಮಾಡಿದ ವೈದ್ಯಕೀಯ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 23:55 IST
Last Updated 31 ಮಾರ್ಚ್ 2025, 23:55 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು, 125ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು ₹1 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.

ಆರು ತಿಂಗಳ ಒಳಗೆ ಅಂಗಾಂಗ ಮರು ಪಡೆಯುವಿಕೆ ಕೇಂದ್ರವು ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಮಾಹಿತಿ ನೀಡಿದ್ದಾರೆ.

‘ಕಸಿ ಮಾಡಲು ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವು ಆಸ್ಪತ್ರೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಕೇಂದ್ರ, ದೇಹದಾನಿಗಳು ಮೃತಪಟ್ಟಾಗ ಅಂಗಗಳನ್ನು ಸಂಗ್ರಹಿಸುವ ವಿಶೇಷ ಘಟಕವಾಗಿ ಕಾರ್ಯನಿರ್ವಹಿಸಲಿದೆ. ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೌಲಭ್ಯಗಳು ಮತ್ತು ವಿವಿಧ ಹಂತದ ತನಿಖಾ ಸಾಮರ್ಥ್ಯಗಳನ್ನು ಹೊಂದಿದ್ದು,‌ ಸಮಗ್ರ ಸೇವೆ ನೀಡಲಿದೆ’ ಎಂದು ಅವರು ತಿಳಿಸಿದ್ದಾರೆ. 

ADVERTISEMENT

ದಕ್ಷಿಣ ಭಾರತದ ಅತಿ ದೊಡ್ಡ ಆಸ್ಪತ್ರೆ: ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರವನ್ನು ಹೊಂದಿರುವ ವಿಕ್ಟೋರಿಯಾ ಆಸ್ಪತ್ರೆ, ಗ್ಯಾಸ್ಟ್ರೊ ಎಂಟರಾಲಜಿ ಮತ್ತು ಮೂತ್ರವಿಜ್ಞಾನ ಅಂಗಾಂಗ ಕಸಿ, ಪ್ರಾದೇಶಿಕ ನೇತ್ರವಿಜ್ಞಾನ, ಚರ್ಮ ಬ್ಯಾಂಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಇಂಥ ವಿಶೇಷ ಸೌಲಭ್ಯಗಳನ್ನು ಹೊಂದಿರುವ ದಕ್ಷಿಣ ಭಾರತದ ಅತಿದೊಡ್ಡ ಆಸ್ಪತ್ರೆಗಳಲ್ಲಿ ‘ವಿಕ್ಟೋರಿಯಾ’ವೂ ಒಂದಾಗಿದೆ.

ಅಂಗಾಂಗ ಮರುಪಡೆಯುವಿಕೆಯಲ್ಲಿ, ಸಂಭಾವ್ಯ ದಾನಿಗಳ ಗುರುತಿಸುವಿಕೆ ಮತ್ತು ಸುರಕ್ಷಿತ ಅಂಗಾಂಗ ದಾನ ಪ್ರಕ್ರಿಯೆಗೆ ಕುಟುಂಬ ಸಮಾಲೋಚನೆ, ಉನ್ನತ ಮಟ್ಟದ ಐಸಿಯು ಆರೈಕೆ ಮತ್ತು ಕಾನೂನು ಕ್ರಮಗಳು ಅಗತ್ಯ. ಈ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಮಗ್ರ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸುವುದರಿಂದ ಅಂಗಾಂಗ ದಾನ ಪ್ರಕ್ರಿಯೆ ಹೆಚ್ಚಿಸಲು ನಮಗೆ ಅವಕಾಶ ಸಿಗುತ್ತದೆ. ಇದರಿಂದ ಬಡವರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಹೇಳಿದ್ದಾರೆ.

ಹೆಲಿಪ್ಯಾಡ್‌ ನಿರ್ಮಾಣ
ಅಂಗಾಂಗ ಸಾಗಣೆಗೆ ಅನುಕೂಲವಾಗಲೆಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.