
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾವಯವ ಕೃಷಿ ಪರಿವಾರ ಮತ್ತು ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಜಂಟಿಯಾಗಿ 2024ರ ಜ.12 ಮತ್ತು 13ರಂದು ‘ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು’ ಎಂಬ ಶೀರ್ಷಿಕೆಯಡಿ ಕೊಲ್ಲಾಪುರ ಸಮೀಪದ ಕನ್ನೇರಿಯ ಸಿದ್ಧಗಿರಿ ಸಂಸ್ಥಾನದಲ್ಲಿ ಸಮಾವೇಶ ಹಮ್ಮಿಕೊಂಡಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ‘ಸಮಾವೇಶದಲ್ಲಿ ಸಾವಯವ ಕೃಷಿ, ಜೀವ ವೈವಿಧ್ಯ, ಗ್ರಾಮ ಜೀವನ ಸುಧಾರಣೆ, ಗೋ ಸಂರಕ್ಷಣೆ, ಪರಿಸರ ಸಂರಕ್ಷಣೆ, ಸಾವಯವ ಮಾರುಕಟ್ಟೆ, ಗ್ರಾಮೀಣ ಯುವಜನರಲ್ಲಿ ಕೃಷಿ ಮಹತ್ವದ ಅರಿವು, ಕೃಷಿಕರಿಗೆ ಕಂಕಣ ಭಾಗ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. 10 ಸಾವಿರಕ್ಕೂ ಅಧಿಕ ಕೃಷಿಕರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಹೇಳಿದರು.
‘ಈ ಸಮಾವೇಶದಲ್ಲಿ 500ರಿಂದ ಸಾವಿರ ಗಣ್ಯರು ಪಾಲ್ಗೊಳ್ಳುತ್ತಾರೆ. ಕೃಷಿ ತಜ್ಞರು, ವಿಜ್ಞಾನಿಗಳು, ವಿಶ್ವವಿದ್ಯಾಲಯದ ಕುಲಪತಿಗಳು ಸಹ ಪಾಲ್ಗೊಳ್ಳುತ್ತಾರೆ. ಒಂದೂವರೆ ಎಕರೆಯಲ್ಲಿ 180 ಬೆಳೆಗಳ ಸಂಯೋಜನೆ ಸಮಾವೇಶದ ಆಕರ್ಷಣೆಯಾಗಿದೆ. ಸಾವಯವ ಉತ್ಪನ್ನ, ವೈವಿಧ್ಯಮಯ ಮೇವಿನ ತಾಕು, ಗೋ ಶಾಲೆ, ದೇಸಿ ಬೀಜ ವೈವಿಧ್ಯ ಸೇರಿ ಹಲವು ವಿಶೇಷತೆಯನ್ನು ಸಮಾವೇಶ ಹೊಂದಿರಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.