ADVERTISEMENT

ಉಸ್ತುವಾರಿ ಹೊಣೆ ಖಾಸಗಿ ಸಂಸ್ಥೆಗೆ: ನಿರ್ಧಾರ

ನಮ್ಮ ಮೆಟ್ರೊ: ಓಆರ್‌ಆರ್‌– ವಿಮಾನ ನಿಲ್ದಾಣ ಮಾರ್ಗ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:44 IST
Last Updated 18 ಸೆಪ್ಟೆಂಬರ್ 2020, 19:44 IST

ಬೆಂಗಳೂರು: ಹೊರವರ್ತುಲ ರಸ್ತೆ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಪ್ರತ್ಯೇಕ ಪ್ರಾಜೆಕ್ಟ್‌‌ ಮ್ಯಾನೇಜ್‌ಮೆಂಟ್ ಕನ್ಸಲ್ಟಂಟ್ (ಪಿಎಂಸಿ) ನೇಮಿಸಲು ಉದ್ದೇಶಿಸಿದ್ದು, ಆಸಕ್ತರಿಂದ ಟೆಂಡರ್‌ ಆಹ್ವಾನಿಸಿದೆ.

ನಿಗಮದಲ್ಲಿರುವ ತಜ್ಞರ ತಂಡವೇ ಈವರೆಗೆ ಯೋಜನಾ ನಿರ್ವಹಣೆಯ ಕಾರ್ಯ ಮಾಡುತ್ತಿತ್ತು. ಈಗ ಈ ಮಾರ್ಗಕ್ಕೆ ಹೊರಗಡೆಯಿಂದ ಕನ್ಸಲ್ಟಂಟ್ ತಂಡವನ್ನು ನೇಮಿಸಲು ನಿರ್ಧರಿಸಲಾಗಿದೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಈ ಯೋಜನೆಗೆ ಅಗತ್ಯ ಆರ್ಥಿಕ ನೆರವು ನೀಡುತ್ತಿದ್ದು, ಅದರ ಷರತ್ತಿನ ಮೇರೆಗೆ ನಿಗಮ ಈ ಟೆಂಡರ್‌ ಆಹ್ವಾನಿಸಿದೆ.

‘ನಮ್ಮ ಮೆಟ್ರೊ’ 2ಎ ಅಡಿ 18.36 ಕಿ.ಮೀ. ಮತ್ತು 2ಬಿ ಅಡಿ 36.51 ಕಿ.ಮೀ. ನಿರ್ಮಾಣಕ್ಕಾಗಿ ಎಡಿಬಿ ಸುಮಾರು ₹3,760 ಕೋಟಿ ನೆರವು ನೀಡಲು ಮುಂದೆ ಬಂದಿದೆ. ಈ ಮಾರ್ಗಕ್ಕಾಗಿ ಪಿಎಂಸಿಯನ್ನು ನಿಗಮದ ಹೊರಗಿನಿಂದ ಟೆಂಡರ್‌ ಮೂಲಕ ನೇಮಿಸಬೇಕು ಎಂದು ಷರತ್ತು ವಿಧಿಸಿತ್ತು.

ADVERTISEMENT

ಸಾಮಾನ್ಯವಾಗಿ ಈ ತಂಡದಲ್ಲಿ ಸುಮಾರು 30ರಿಂದ 40 ತಜ್ಞ ಎಂಜಿನಿಯರ್‌ಗಳಿರುತ್ತಾರೆ. ನಿಗಮವು ನಿರ್ಮಿಸುವ ಸಿವಿಲ್ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿ, ಅನುಮೋದನೆ ನೀಡುವುದು ಈ ತಂಡದ ಕೆಲಸ. ಈ ಮಧ್ಯೆ, ಬಿಎಂಆರ್‌ಸಿಎಲ್‌ನ 200-250 ಎಂಜಿನಿಯರ್‌ಗಳ ಕನ್ಸಲ್ಟನ್ಸಿ ತಂಡವೂ ಇದೆ. ಅದು ಕೂಡ ಆಗಾಗ್ಗೆ ಗುಣಮಟ್ಟ ಪರಿಶೀಲನೆ ನಡೆಸಿ, ನಿಗಮಕ್ಕೆ ಮಾರ್ಗದರ್ಶನ ನೀಡುತ್ತಿರುತ್ತದೆ.

ಅ.10 ಕೊನೆಯ ದಿನ:

ಟೆಂಡರ್ ಸಲ್ಲಿಕೆಗೆ ಅ. 10 ಕೊನೆಯ ದಿನವಾಗಿದ್ದು, ಅಕ್ಟೋಬರ್ 20ರಂದು ಮಧ್ಯಾಹ್ನ 3.30ಕ್ಕೆ ಟೆಂಡರ್ ತೆರೆಯಲಾಗುವುದು. 48 ತಿಂಗಳ ಗುತ್ತಿಗೆ ಇದಾಗಿದೆ. ಇನ್ನು ಈಗಾಗಲೇ ಬಿಎಂಆರ್‌ಸಿಎಲ್ ಯೋಜನೆಯ ಸಿಲ್ಕ್‌ ಬೋರ್ಡ್ ಜಂಕ್ಷನ್-ಎಚ್‌ಬಿಆರ್ ಲೇಔಟ್ ಹಾಗೂ ಎಚ್‌ಬಿಆರ್ ಲೇಔಟ್-ವಿಮಾನ ನಿಲ್ದಾಣ ಮಾರ್ಗಗಳಿಗೆ ಎರಡು ಕಂಪನಿಗಳನ್ನು ಸಮಗ್ರ ವಿನ್ಯಾಸ ಸಮಾಲೋಚಕರನ್ನಾಗಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.