ರಾಜರಾಜೇಶ್ವರಿನಗರ: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದ ಸಚಿವರು, ಅಲ್ಲಿ ನೂತನವಾಗಿ ಪ್ರಾರಂಭಿಸಲು ಉದ್ದೇಶಿಸಿರುವ 100 ಆಮ್ಲಜನಕ ಹಾಸಿಗೆಗಳ ಪರಿಶೀಲನೆ ನಡೆಸಿದರು.
ಜ್ಞಾನಭಾರತಿ ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು.
ಆಮ್ಲಜನಕ ಹಾಸಿಗೆ ವ್ಯವಸ್ಥೆ, ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆ, ರೋಗಿಗಳಿಗೆ ಲಭ್ಯವಾಗುತ್ತಿರುವ ಚಿಕಿತ್ಸೆ, ಔಷಧಗಳು, ವೈದ್ಯಕೀಯ ಕಿಟ್‌ಗಳು, ನೀರು-ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗಿದೆ, ತುರ್ತು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವ ರೀತಿ ಆಸ್ಪತ್ರೆ ಸಜ್ಜಾಗಿದೆ ಎಂಬ ಬಗ್ಗೆ ಸೋಮಶೇಖರ್ ಅವರು ಕೇಂದ್ರ ಸಚಿವರಿಗೆ ವಿವರಣೆ ನೀಡಿದರು.
ಸೋಮಶೇಖರ್ ಮಾತನಾಡಿ, ‘ಯಶವಂತಪುರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವು ಆಸ್ಪತ್ರೆಗಳಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ಆಮ್ಲಜನಕ ಹಾಸಿಗೆ, ಆಮ್ಲಜನಕ ಕಾನ್ಸಂಟ್ರೇಟರ್, ವೈದ್ಯಕೀಯ ಕಿಟ್ ಗಳು ಸೇರಿದಂತೆ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಸಂಬಂಧಪಟ್ಟಂತೆ ಮೂಲಸೌಕರ್ಯವನ್ನು ಶಾಶ್ವತವಾಗಿ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.