ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅಸಹಜ ಸಾವಿನ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಗೆ ಪದ್ಮಲತಾ ಅಪಹರಣ, ಸಾವಿನ ಪ್ರಕರಣವನ್ನು ಸೇರಿಸಬೇಕು’ ಎಂದು ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಎಂ.ಎ.ಬೇಬಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಹೆಣ್ಣುಮಕ್ಕಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಾಜ್ಯ ಸರ್ಕಾರ ರಚಿಸಿರುವುದು ಸ್ವಾಗತಾರ್ಹ. ಆದರೆ 1986ರಲ್ಲಿ ಸಿಪಿಎಂ ಶಾಖಾ ಕಾರ್ಯದರ್ಶಿ ದೇವಾನಂದ ಅವರ ಮಗಳು ಪದ್ಮಲತಾ ಅಪಹರಣಕ್ಕೆ ಒಳಗಾಗಿ, ನಂತರ ಕೊಲೆಯಾಗಿದ್ದಳು. ದೇವಾನಂದ್ ಅವರು ಭೂ ಮಾಫಿಯಾ ವಿರುದ್ದ ಹೋರಾಟ ಮಾಡಿದ್ದಕ್ಕೆ ಮಗಳನ್ನು ಕೊಲೆ ಮಾಡಲಾಗಿತ್ತು. ಆಗಿನ ಗೃಹ ಸಚಿವ ಬಿ.ರಾಚಯ್ಯ ತನಿಖೆಗೆ ಆದೇಶಿಸಿದರೂ ಒತ್ತಡದಿಂದಾಗಿ ಆರೋಪಿಗಳನ್ನು ಪತ್ತೆ ಮಾಡಲು ಆಗಲಿಲ್ಲ’ ಎಂದು ತಿಳಿಸಿದ್ದಾರೆ.
‘ಪದ್ಮಲತಾ ಪ್ರಕರಣದಲ್ಲಿ ನಾಲ್ಕು ದಶಕದ ನಂತರವೂ ನ್ಯಾಯ ದೊರೆತಿಲ್ಲ. ಈ ಪ್ರಕರಣವೂ ಸೇರಿದಂತೆ ಬಯಲಾಗದ ಪ್ರಕರಣಗಳನ್ನು ಎಸ್‌ಐಟಿ ತನಿಖೆ ವ್ಯಾಪ್ತಿಗೆ ಸೇರಿಸಬೇಕು’ ಎಂದು ಬೇಬಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.