ADVERTISEMENT

‘ಪಾಕ್‌ ದಂಪತಿಗೇಕೆ ವೃಥಾ ಹಣ ವೆಚ್ಚ’

ವೀಸಾ ಅವಧಿ ಮುಗಿದರೂ ಭಾರತದಲ್ಲಿ ನೆಲೆಸಿರುವ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:28 IST
Last Updated 22 ಏಪ್ರಿಲ್ 2019, 19:28 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ವೀಸಾ ಅವಧಿ ಮುಗಿದ ನಂತರವೂ ಇಲ್ಲಿಯೇ ನೆಲೆಸಿದ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ದಂಪತಿಯನ್ನು ಜೈಲಿನಲ್ಲಿಟ್ಟು, ಭಾರತೀಯರ ತೆರಿಗೆ ಹಣವನ್ನು ಏಕೆ ಖರ್ಚು ಮಾಡಬೇಕು. ಅವರನ್ನು ಪುನಃ ಅವರ ದೇಶಕ್ಕೇ ಕಳುಹಿಸಿದರೆ ಉತ್ತಮವಲ್ಲವೇ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಮದುವೆಯಾಗಲು ಬೆಂಗಳೂರಿಗೆ ಬಂದ ಕರಾಚಿಯ ದಂಪತಿ, ‘ವೀಸಾ ಅವಧಿ ಮುಗಿದರೂ ಇಲ್ಲಿಯೇ ನೆಲೆಸಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದಲ್ಲಿ ಆರೋಪಿಗಳು, ’ನಮಗೆ ವಿಧಿಸಲಾಗಿರುವ ಶಿಕ್ಷೆ ಅವಧಿಯನ್ನು ಕಡಿತಗೊಳಿಸಬೇಕು’ ಎಂದು ಕೋರಿದ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ಅರ್ಜಿದಾರರಿಗೆ ವಿಧಿಸಲಾಗಿರುವ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿ ಪಾಕಿಸ್ತಾನದ ರಾಯಭಾರಿ ಕಚೇರಿ ವಶಕ್ಕೆ ಒಪ್ಪಿಸುವುದು ಉತ್ತಮವಲ್ಲವೇ’ ಎಂದು ಸರ್ಕಾರಿ ವಕೀಲ ಎಸ್.ರಾಚಯ್ಯ ಅವರನ್ನು ಪ್ರಶ್ನಿಸಿದರು.

ADVERTISEMENT

ಇದಕ್ಕೆ ರಾಚಯ್ಯ, ‘ಕಾನೂನಿನಲ್ಲಿ ಅವಕಾಶವಿದ್ದರೆ ಅದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪವಿಲ್ಲ’ ಎಂದರು. ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ಪಾಕಿಸ್ತಾನದ ಕರಾಚಿ ಜಿಲ್ಲೆಯ ಚಕ್ರಫೋಟ್‌ ನಿವಾಸಿ ಕಾಸೀಫ್ ಶಂಸುದ್ದೀನ್ ಹಾಗೂ ಕರಾಚಿ ಜಿಲ್ಲೆಯವರೇ ಆದ ಕಿರಣ್ ಗುಲಾಮ್ ಅಲಿ ಬೆಂಗಳೂರಿಗೆ ಬಂದು ಮದುವೆಯಾಗಿದ್ದರು. ದಂಪತಿ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತಿದ್ದರು.

ಏತನ್ಮಧ್ಯೆ, ‘ವೀಸಾವಧಿ ಮುಗಿದ ನಂತರವೂ ದಂಪತಿ ಇಲ್ಲಿಯೇ ನೆಲೆಸಿದ್ದಾರೆ’ ಎಂಬ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇ ಔಟ್ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ವಿದೇಶೀಯರ ನೋಂದಣಿ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ನಗರದ 44ನೇ ಎಸಿಎಂಎಂ ನ್ಯಾಯಾಲಯ, ಎರಡೂ ಪ್ರಕರಣಗಳಲ್ಲಿ ಕ್ರಮವಾಗಿ 21 ಮತ್ತು 12 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ, ‘ಎರಡೂ ಪ್ರಕರಣಗಳ ಶಿಕ್ಷೆಯನ್ನು ಪ್ರತ್ಯೇಕವಾಗಿಯೇ ಅನುಭವಿಸಬೇಕು’ ಎಂದು ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿರುವ ಅರ್ಜಿದಾರರು, ‘ನಾವು ಈಗಾಗಲೇ 21 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದೇವೆ. ಊರಿನಲ್ಲಿ ನಮಗೆ ವೃದ್ಧ ಪೋಷಕರು ಹಾಗೂ ತಂಗಿಯರು ಇದ್ದಾರೆ. ಅವರು ನಮ್ಮ ಬಿಡುಗಡೆಯನ್ನೇ ಕಾಯುತ್ತಿದ್ದಾರೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಏಕಕಾಲದಲ್ಲಿ ಜಾರಿಗೆ ಬರುವಂತೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.