ADVERTISEMENT

ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ: ಲಕ್ಷ್ಮೀನಾರಾಯಣ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 20:00 IST
Last Updated 13 ಅಕ್ಟೋಬರ್ 2021, 20:00 IST

ಬೆಂಗಳೂರು: ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗವನ್ನು ರಚಿಸಿದ್ದು, ನಿವೃತ್ತ ಐಎಎಸ್‌ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವಾರ್ಡ್‌ಗಳ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಮಾಡಲು ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ 2021’ ಕ್ಕೆ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಇದೀಗ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಆಯೋಗಕ್ಕೆ ಗ್ರಾಮೀಣಾಭಿವೃದ್ಧಿ, ವಿಕೇಂದ್ರೀಕರಣ ಮತ್ತು ಪಂಚಾಯತ್‌ ವಿಷಯಗಳಲ್ಲಿ ಅನುಭವ ಹೊಂದಿರುವ ಸರ್ಕಾರದ ನಿವೃತ್ತ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಲಯದ ಒಬ್ಬ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು. ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಪದ ನಿಮಿತ್ತ ಸದಸ್ಯರಾಗಿಯೂ ಮತ್ತು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವಿಷಯದಲ್ಲಿ ವ್ಯವಹರಿಸುತ್ತಿರುವ ಪದ ನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಯನ್ನು ಪದ ನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗುವುದು.

ADVERTISEMENT

ಆಯೋಗದ ಕಾರ್ಯವ್ಯಾಪ್ತಿ: ವಾರ್ಡ್‌ಗಳು ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ. ಮೀಸಲಾತಿ, ಹಿಂದಿನ ಜನಗಣತಿಯನ್ನು ಆಧರಿಸಿ ಪಂಚಾಯಿತಿಗಳಿಗೆ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಮಾಡುವುದು. ಎಲ್ಲ ಕ್ಷೇತ್ರಗಳು ಮತ್ತು ವಾರ್ಡ್‌ಗಳಲ್ಲಿ ಜನಸಂಖ್ಯೆ ಸಮಾನವಾಗಿರುವಂತೆ ನೋಡಿಕೊಳ್ಳುವುದು. ಪ್ರತಿಯೊಂದು ಪ್ರಾದೇಶಿಕ ವಾರ್ಡ್‌ಗಳು ಅಥವಾ ಚುನಾವಣಾ ಕ್ಷೇತ್ರಗಳು ಕಾರ್ಯ ಸಾಧುವಾಗುವಷ್ಟರ ಮಟ್ಟಿಗೆ ಭೌಗೋಳಿಕ ನಿಬಿಡತೆ ಪ್ರದೇಶವನ್ನು ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಮೀಸಲಾತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆಗೆ ಸರಿಯಾಗಿಲ್ಲ ಎಂಬ
ಕಾರಣಕ್ಕೆ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ. ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಹೈಕೋರ್ಟ್‌ಗೆ ಸಲ್ಲಿಸಬೇಕಾಗಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.