ADVERTISEMENT

‘ಪಾನಿಪುರಿ’ ವ್ಯಾಪಾರಿಗಳಿಗೆ ‘ಕಹಿ’ಯಾದ ಕೋವಿಡ್

ಬೀದಿಬದಿ ಅಂಗಡಿಗಳತ್ತ ಸುಳಿಯದ ಜನ l ಕೆಟ್ಟು ಹೋಗುವ ಪದಾರ್ಥಗಳು

ಸಂತೋಷ ಜಿಗಳಿಕೊಪ್ಪ
Published 21 ಜನವರಿ 2022, 20:29 IST
Last Updated 21 ಜನವರಿ 2022, 20:29 IST
ಹಲಸೂರಿನ ರಸ್ತೆ ಬದಿಯಲ್ಲಿ ಪಾನಿಪುರಿ ಅಂಗಡಿ ತೆರೆದಿರುವ ವ್ಯಾಪಾರಿ, ಗ್ರಾಹಕರಿಗಾಗಿ ಕಾಯುತ್ತ ಕುಳಿತಿರುವುದು - ಪ್ರಜಾವಾಣಿ ಚಿತ್ರ
ಹಲಸೂರಿನ ರಸ್ತೆ ಬದಿಯಲ್ಲಿ ಪಾನಿಪುರಿ ಅಂಗಡಿ ತೆರೆದಿರುವ ವ್ಯಾಪಾರಿ, ಗ್ರಾಹಕರಿಗಾಗಿ ಕಾಯುತ್ತ ಕುಳಿತಿರುವುದು - ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಲವರ ನಾಲಿಗೆಗೆ ರುಚಿಯಾಗಿದ್ದ ಪಾನಿಪುರಿ, ಇತ್ತೀಚಿನ ದಿನಗಳಲ್ಲಿ ತನ್ನ ರುಚಿಯನ್ನೇ ಕಳೆದುಕೊಂಡಿದೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಪಾನಿಪುರಿ ತಿನ್ನುವವರ ಸಂಖ್ಯೆ ಕಡಿಮೆಯಾಗಿದ್ದು, ಅದೇ ವ್ಯಾಪಾರ ನಂಬಿಕೊಂಡಿರುವ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಾಲಾ–ಕಾಲೇಜು, ಉದ್ಯಾನ, ಮಾರುಕಟ್ಟೆ, ಚಿತ್ರಮಂದಿರ, ಮಾಲ್, ನಿಲ್ದಾಣ, ತಂಗುದಾಣ, ಪ್ರಮುಖ ರಸ್ತೆ... ಹೀಗೆ ಜನಸಂದಣಿ ಇರುವ ಜಾಗದಲ್ಲಿ ಪುಟ್ಟದೊಂದು ಪಾನಿಪುರಿ ಅಂಗಡಿ ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದ ಜನ ಇಂದು ಊರು ಬಿಡುತ್ತಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಉಂಟಾಗುತ್ತಿದ್ದಂತೆ, ಪಾನಿಪುರಿ ಅಂಗಡಿಗಳತ್ತ ಜನ ಮುಖ ಹಾಕುತ್ತಿಲ್ಲ. ‘ಪೂರಿ’ ಪೊಟ್ಟಣ ಹಾಗೂ ಪಾತ್ರೆಗಳಲ್ಲಿ ಪಾನೀಯ ಸಿದ್ಧಪಡಿಸಿಟ್ಟುಕೊಂಡ ವ್ಯಾಪಾರಿ, ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ADVERTISEMENT

ಸ್ಥಳೀಯರ ಜೊತೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಗುಜರಾತ್ ಹಾಗೂ ಇತರೆ ರಾಜ್ಯಗಳ ಯುವಕರೂ ಪಾನಿಪುರಿ ಅಂಗಡಿ ನಡೆಸುತ್ತಿದ್ದಾರೆ. ಬಹುತೇಕರು, ಹೂಡಿದ್ದ ಬಂಡವಾಳ ವಾಪಸು ತೆಗೆಯಲು ಪರದಾಡುತ್ತಿದ್ದಾರೆ.

ವಿಜಯನಗರ, ರಾಜಾಜಿನಗರ, ಮಾಗಡಿ ರಸ್ತೆ, ಜಯನಗರ, ಹನುಮಂತನಗರ, ಬಸವನಗುಡಿ, ಕುಮಾರಸ್ವಾಮಿ ಲೇಔಟ್, ಕೆಂಗೇರಿ, ರಾಜರಾಜೇಶ್ವರಿನಗರ, ಅಶೋಕನಗರ, ಇಂದಿರಾನಗರ, ಚರ್ಚ್‌ಸ್ಟ್ರೀಟ್, ಕೋರಮಂಗಲ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಪಾನಿಪುರಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಆಗಿದೆ. ಅಲ್ಲಲ್ಲಿ ಒಂದೊಂದು ಅಂಗಡಿಗಳಿದ್ದರೂ ಅಲ್ಲಿ ಗ್ರಾಹಕರ ಸುಳಿವಿಲ್ಲ.

‘ಬೆಂಗಳೂರಿಗೆ ಬಂದು 10 ವರ್ಷವಾಗಿದ್ದು, ಪಾನಿಪುರಿ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದೇನೆ. ಕೋವಿಡ್‌ಗೂ ಮುನ್ನ ದಿನಕ್ಕೆ 2 ಸಾವಿರದಿಂದ 5 ಸಾವಿರ ವ್ಯಾಪಾರ ಆಗುತ್ತಿತ್ತು. ಕೋವಿಡ್ ಅಲೆಗಳು ಶುರುವಾದಾಗಿನಿಂದ ₹ 500 ವ್ಯಾಪಾರವೂ ಕಷ್ಟವಾಗಿದೆ’ ಎಂದು ವಿಜಯನಗರದ ಪಾನಿಪುರಿ ವ್ಯಾಪಾರಿ ಅಕ್ಷಯ್‌ಕುಮಾರ್‌ ಹೇಳಿದರು.

ರಾಜಾಜಿನಗರದ ರಾಜಕುಮಾರ್ ರಸ್ತೆಯಲ್ಲಿ ಪಾನಿಪುರಿ ಮಾರುವ ಚರಣ್‌ಸಿಂಗ್, ‘ಪಾನಿಪುರಿ ತಿನ್ನಲು ಜನರ ದಂಡೇ ಬರುತ್ತಿತ್ತು. ಅದರಲ್ಲೂ ಮಹಿಳೆಯರೇ ಹೆಚ್ಚು ಪಾನಿಪುರಿ ತಿನ್ನುತ್ತಿದ್ದರು. ಇದೀಗ ಶೇ 90ರಷ್ಟು ಗ್ರಾಹಕರು ಅಂಗಡಿಗೆ ಬರುತ್ತಿಲ್ಲ’ ಎಂದರು.

’ಶಾಲೆ, ಕಾಲೇಜು, ಟ್ಯೂಶನ್, ಶಿಕ್ಷಣ ಸಂಸ್ಥೆಗಳು, ಪರೀಕ್ಷಾ ತರಬೇತಿ ಕೇಂದ್ರಗಳು ಎಲ್ಲವೂ ಆಗಾಗ ಬಂದ್ ಆಗುತ್ತವೆ. ರಸ್ತೆಯಲ್ಲೂ ಜನರಿಲ್ಲ. ‍ಪೂರಿ ತಂದರೂ ವ್ಯಾಪಾರವಿಲ್ಲ‘ ಎಂದು ತಿಳಿಸಿದರು.

ಸುಬ್ರಹ್ಮಣ್ಯನಗರದ ಪಾನಿಪುರಿ ವ್ಯಾಪಾರಿ ಬಲರಾಮ್‌, ‘ನಾನು ರಾಜಸ್ಥಾನದವನು. ಈ ವ್ಯಾಪಾರ, ಕುಟುಂಬದ 7 ಮಂದಿಯನ್ನು ಸಾಕುವ ಶಕ್ತಿ ನೀಡಿತ್ತು. ಈಗ ಒಬ್ಬನ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿದೆ’ ಎಂದು ಬೇಸರಗೊಂಡರು.

‘ಪಾನಿಪುರಿ ತಿನ್ನುವುದರಿಂದ ಸೋಂಕು ಹರಡುವುದಾಗಿ ಕೆಲವರು ಸುದ್ದಿ ಹಬ್ಬಿಸಿದರು. ಅಂದಿನಿಂದ ವ್ಯಾಪಾರವಿಲ್ಲ. ಹಲವು ವ್ಯಾಪಾರಿಗಳು, ಅಂಗಡಿ ಮುಚ್ಚಿ ಊರಿಗೆ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ನಾನೂ ಹೋಗಲಿದ್ದೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.