ADVERTISEMENT

ಕಾಲ್ತುಳಿತ ಘಟನೆ: ಗೇಟ್‌ ತೆರೆದ ತಕ್ಷಣವೇ ತಳ್ಳಿದರು...

ಕುತ್ತಿಗೆಗೆ ಬೆಲ್ಟ್‌, ಕೈ–ಕಾಲಿಗೆ ಬ್ಯಾಂಡೇಜ್‌ ಸಹಿತ ವಿಚಾರಣೆಗೆ ಬಂದಿದ್ದ ಗಾಯಾಳುಗಳು...

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 19:02 IST
Last Updated 11 ಜೂನ್ 2025, 19:02 IST
ದುರಂತದಲ್ಲಿ ಮೃತಪಟ್ಟ ಭೂಮಿಕ್‌ ಅವರ ತಂದೆ ಲಕ್ಷ್ಮಣ್‌ ಅವರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಪರಿಹಾರದ ಚೆಕ್‌ ವಿತರಣೆ ಮಾಡಿದರು 
ದುರಂತದಲ್ಲಿ ಮೃತಪಟ್ಟ ಭೂಮಿಕ್‌ ಅವರ ತಂದೆ ಲಕ್ಷ್ಮಣ್‌ ಅವರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಪರಿಹಾರದ ಚೆಕ್‌ ವಿತರಣೆ ಮಾಡಿದರು    

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟೀರಿಯಲ್‌ ತನಿಖೆ ನಡೆಯುತ್ತಿದ್ದು, ಬುಧವಾರ ಗಾಯಾಳುಗಳ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು.

ಕಾಲ್ತುಳಿತದಿಂದ ಗಾಯಗೊಂಡಿದ್ದ 64 ಮಂದಿಯನ್ನು ವೈದೇಹಿ, ಸ್ಪರ್ಶ್ ಹಾಗೂ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಾಯಾಳುಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಅವರ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭವಾಗಿದೆ. ಘಟನೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಜೂನ್ 11, 13 ಮತ್ತು 17ರಂದು ಸಂತ್ರಸ್ತರು ಹಾಗೂ ಅವರ ಕುಟುಂಬ ಸದಸ್ಯರಿಂದ ಹೇಳಿಕೆ ದಾಖಲಿಸಿಕೊಳ್ಳಲು ದಿನಾಂಕ ನಿಗದಿಪಡಿಸಲಾಗಿತ್ತು. ಬುಧವಾರ 14 ಮಂದಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಜಿ.ರಸ್ತೆಯ ಜಿಲ್ಲಾಧಿಕಾರಿ ಕಚೇರಿಗೆ ಗಾಯಾಳುಗಳು ಕುತ್ತಿಗೆಗೆ ಬೆಲ್ಟ್‌, ಕೈ–ಕಾಲಿಗೆ ಬ್ಯಾಂಡೇಜ್‌ ಹಾಕಿಕೊಂಡು ಕುಂಟುತ್ತಲೇ ಹೇಳಿಕೆ ದಾಖಲಿಸಲು ಬಂದಿದ್ದರು. ಗಾಯಾಳುಗಳಿಗೆ ಪೋಷಕರು ಹಾಗೂ ಸಂಬಂಧಿಕರು ನೆರವಾದರು. 

ADVERTISEMENT

ಘಟನೆ ಹೇಗೆ ಸಂಭವಿಸಿತು? ಯಾವ ಮಾಹಿತಿ ಆಧರಿಸಿ ಆರ್‌ಸಿಬಿ ತಂಡದ ವಿಜಯೋತ್ಸವದ ಆಚರಣೆ ವೀಕ್ಷಿಸಲು ಕ್ರೀಡಾಂಗಣದ ಬಳಿಗೆ ಬಂದಿದ್ದೀರಿ? ಗೇಟ್‌ ಎಷ್ಟು ಹೊತ್ತಿಗೆ ತೆರೆಯಲಾಯಿತು? ಸ್ಥಳದಲ್ಲಿ ಏನೆಲ್ಲಾ ವ್ಯವಸ್ಥೆ ಮಾಡಲಾಗಿತ್ತು ಎಂಬ ಪ್ರಶ್ನೆಗಳನ್ನು ತನಿಖಾ ತಂಡವು ಕೇಳಿ, ಹೇಳಿಕೆ ದಾಖಲು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಕ್ರೀಡಾಂಗಣದ ಬಳಿ ಆಂಬುಲೆನ್ಸ್ ಇರಲಿಲ್ಲ. ಪ್ರಥಮ ಚಿಕಿತ್ಸೆಗೂ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಯೂ ಇರಲಿಲ್ಲ. ಪೊಲೀಸರೇ ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಕರೆದೊಯ್ದರು. ನೆಲಕ್ಕೆ ಬಿದ್ದವರ ನರಳಾಟ ನೋಡಲು ಆಗುತ್ತಿರಲಿಲ್ಲ’ ಎಂಬುದಾಗಿ ಗಾಯಾಳುಗಳು ಹೇಳಿಕೆ ನೀಡಿದ್ದಾರೆ.

‘ಗೇಟ್‌ ನಂ.1ರಲ್ಲಿ ಬಹಳ ಸಮಯದಿಂದಲೂ ಕಾಯುತ್ತಿದ್ದೆ. ಅಲ್ಲಿ ಹೆಚ್ಚಿನ ಜನರು ಜಮಾಯಿಸಿದ್ದರು. ಗೇಟ್‌ ತೆರೆದ ತಕ್ಷಣವೇ ಹಿಂದಿನವರು ತಳ್ಳಿದರು. ಆಗ, ಹಲವರು ಕೆಳಕ್ಕೆ ಬಿದ್ದರು. ಆಗ ನಾನು ಕಬ್ಬಿಣದ ರಾಡ್ ಮೇಲೆ ಬಿದ್ದೆ’ ಎಂದು ಗಾಯಾಳು ರಾಜೇಶ್‌ ಮಾಧ್ಯಮದವರಿಗೆ ತಿಳಿಸಿದರು.

‘ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ದೂಷಣೆ ಮಾಡುವುದಿಲ್ಲ. ಜನರದ್ದೂ ಸಹ ತಪ್ಪು’ ಎಂದೂ ಹೇಳಿದರು.

‘ವಿಧಾನಸೌಧದ ಬಳಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕ್ರೀಡಾಂಗಣದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದರು. ಮುಂದಿನ ದಿನಗಳಲ್ಲಿ ಕ್ರೀಡಾಂಗಣಕ್ಕೆ ಹೋಗಿ ಪಂದ್ಯ ವೀಕ್ಷಿಸಲು ಭಯವಾಗುತ್ತದೆ. ಮುಂಚಿತವಾಗಿ ಟಿಕೆಟ್ ನೀಡಿದ್ದರೆ ಅನಾಹುತ ಆಗುತ್ತಿರಲಿಲ್ಲ’ ಎಂದು ಗಾಯಾಳು ಮೋನಿಶ್ ಹೇಳಿದರು.

‘ಕ್ರೀಡಾಂಗಣದ ಒಳಕ್ಕೆ ಪ್ರವೇಶಿಸಲು ಜೂನ್‌ 4ರಂದು ಸಂಜೆ 4 ಗಂಟೆಯ ಸುಮಾರಿಗೆ ಗೇಟ್‌ ನಂ.20ರ ಎದುರು ಕಾಯುತ್ತಿದ್ದೆ. ಆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು. ಬ್ಯಾರಿಕೇಡ್‌ಗೆ ನನ್ನ ಕಾಲು ಸಿಕ್ಕಿಹಾಕಿಕೊಂಡಿತು. 20ರಿಂದ 30 ಮಂದಿ ನನ್ನ ಕಾಲನ್ನು ತುಳಿಯುತ್ತಲೇ ಓಡಿದರು’ ಎಂದು ಮತ್ತೊಬ್ಬ ಗಾಯಾಳು ತನಿಖಾ ತಂಡದ ಎದುರು ಹೇಳಿಕೆ ದಾಖಲಿಸಿದ್ದಾರೆ.

ಪರಿಹಾರದ ಚೆಕ್‌ ವಿತರಣೆ: ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಯಲಹಂಕದ ಬಿ.ಎಸ್.ದಿವ್ಯಾಂಶಿ, ಯಲಹಂಕ ನ್ಯೂಟೌನ್‌ನ ಜಿ.ಪ್ರಜ್ವಲ್‌, ಎಂ.ಎಸ್‌.ರಾಮಯ್ಯ ಬಡಾವಣೆಯ ಭೂಮಿಕ್‌ ಹಾಗೂ ತಮಿಳುನಾಡಿನ ತಿರುಪೂರ್‌ನ ಎಂ.ಆರ್‌. ಕಾಮಾಕ್ಷಿದೇವಿ ಅವರ ಕುಟುಂಬದವರಿಗೆ ಜಿಲ್ಲಾಧಿಕಾರಿಯವರು ಪರಿಹಾರದ ಚೆಕ್‌ ವಿತರಣೆ ಮಾಡಿದರು.

ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ₹25 ಲಕ್ಷದ ಚೆಕ್ ಅನ್ನು ಮೃತರ ಪೋಷಕರು ಪಡೆದರು. ಈ ವೇಳೆ ಮೃತ ಮಕ್ಕಳನ್ನು ನೆನಪು ಮಾಡಿಕೊಂಡು ಪೋಷಕರು ಹಾಗೂ ಸಂಬಂಧಿಕರು ಕಣ್ಣೀರು ಹಾಕಿದರು.

ಪೊಲೀಸ್ ಕಮಿಷನರ್‌ ಭೇಟಿ: ನಗರ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್ ಅವರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ದುರಂತ ಸಂಭವಿಸಿದ ಗೇಟ್​​ಗಳ ಬಳಿ ತೆರಳಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಡಿವಿಆರ್‌ಗಳ ಜಪ್ತಿ

ಬೆಂಗಳೂರು: ಕ್ರೀಡಾಂಗಣದ ಸುತ್ತಮುತ್ತಲ 21 ಗೇಟ್‌ಗಳ ಬಳಿ ಅಳವಡಿಸಿದ್ದ 42 ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್‌ ಅನ್ನು ಸಿಐಡಿ ತನಿಖಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ‘ಲಿಂಕ್‌ ರಸ್ತೆ ಕಬ್ಬನ್‌ ಹಾಗೂ ಕ್ವೀನ್ಸ್‌ ರಸ್ತೆಯಲ್ಲಿದ್ದ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲು ಡಿವಿಆರ್‌ ಜಪ್ತಿ ಮಾಡಿಕೊಳ್ಳಲಾಗಿದೆ. ಕ್ರೀಡಾಂಗಣದ ಒಳಗಿರುವ 120ಕ್ಕೂ ಹೆಚ್ಚು ಕ್ಯಾಮೆರಾಗಳ ದೃಶ್ಯಾವಳಿಯನ್ನೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಪೊಲೀಸರು ಹೇಳಿದರು.

ಘಟನೆಯ ಸಂಬಂಧ ಹೇಳಿಕೆ ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಗಾಯಾಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.