ADVERTISEMENT

ವಿದ್ಯುತ್ ಪ್ರವಹಿಸಿ ಬೆಸ್ಕಾಂ ನೌಕರ ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:45 IST
Last Updated 27 ಮೇ 2019, 19:45 IST
ವಿಜಯನಗರದ ಜೈನ್ ಟೆಂಪಲ್ ರಸ್ತೆಯಲ್ಲಿ ಮಳೆಯಿಂದ ಬುಡಮೇಲಾದ ಮರವನ್ನು ಜಿ.ಪರಮೇಶ್ವರ ವೀಕ್ಷಿಸಿದರು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮೇಯರ್‌ ಗಂಗಾಂಬಿಕೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಇದ್ದರು–ಪ್ರಜಾವಾಣಿ ಚಿತ್ರ
ವಿಜಯನಗರದ ಜೈನ್ ಟೆಂಪಲ್ ರಸ್ತೆಯಲ್ಲಿ ಮಳೆಯಿಂದ ಬುಡಮೇಲಾದ ಮರವನ್ನು ಜಿ.ಪರಮೇಶ್ವರ ವೀಕ್ಷಿಸಿದರು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮೇಯರ್‌ ಗಂಗಾಂಬಿಕೆ, ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯ ವೇಳೆ ಉರುಳಿಬಿದ್ದಿದ್ದ ವಿದ್ಯುತ್ ಕಂಬವನ್ನು ಮರು ಸ್ಥಾಪಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಬೆಸ್ಕಾಂ ನೌಕರ ಅಶೋಕ್‌ಕುಮಾರ್ (31) ಎಂಬುವರು ಮೃತಪಟ್ಟಿದ್ದಾರೆ.

ಆರ್‌.ಟಿ.ನಗರದ 1ನೇ ಹಂತದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಆರ್‌.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆನರಸೀಪುರದ ಕೆ.ಹೊಸಹಳ್ಳಿಯ ಅಶೋಕ್‌ಕುಮಾರ್, ಬೆಸ್ಕಾಂನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡು
ತ್ತಿದ್ದರು. ವಿದ್ಯುತ್‌ ಪ್ರವಹಿಸಿ ತೀವ್ರ ಗಾಯಗೊಂಡಿದ್ದ ಅವರನ್ನು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ADVERTISEMENT

ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ: ಮಳೆಗಾಲ ಸಮೀಪಿಸುತ್ತಿರುವುದರಿಂದ ಸಂಭವನೀಯ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಮುಖ್ಯವಾಗಿ ರಸ್ತೆ ಗುಂಡಿ ಮುಚ್ಚಲು ಹಾಗೂ ರಾಜಕಾಲುವೆಗಳ ಪ್ರವಾಹವನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದರು.

‘ರಾಜಕಾಲುವೆಗಳ ಹೂಳು ತೆಗೆಯುವ ಕೆಲಸ ಪೂರ್ಣಗೊಂಡಿದ್ದು, ಪ್ರವಾಹ ಉಂಟಾಗುವುದನ್ನು ತಡೆಯಲು ಸೆನ್ಸರ್‌ ಅಳವಡಿಸಲಾಗುತ್ತಿದೆ. ತಡೆಗೋಡೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಕಸ ಸುರಿಯುವವರ ವಿರುದ್ಧಎಫ್‌ಐಆರ್‌ ದಾಖಲಿಸಿದ್ದೇವೆ’ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಎರಡು ದಿನಗಳಲ್ಲಿ ಬೆಸ್ಕಾಂ ಸಹಾಯವಾಣಿಗೆ 34 ಸಾವಿರ ಕರೆಗಳು ಬಂದಿವೆ. ಬಹುತೇಕ ದೂರುಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ 45 ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 20 ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದೇವೆ’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.

‘8 ವಲಯಗಳ ಜಂಟಿ ಆಯುಕ್ತರು ಜವಾಬ್ದಾರಿ ವಹಿಸಿಕೊಂಡು ಅನಾಹುತ ಆಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಬಿಬಿಎಂಪಿ ಸಹಾಯವಾಣಿ ಹಾಗೂ ಸಾಮಾಜಿಕ‌ ಜಾಲತಾಣಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಸಮಸ್ಯೆಗಳು ಎದುರಾದರೆ ಅದಕ್ಕೆ ಹಿರಿಯ ಅಧಿಕಾರಿಗಳನ್ನ ಹೊಣೆ ಮಾಡಲಾಗುವುದು’ ಎಂದು ಪರಮೇಶ್ವರ ಎಚ್ಚರಿಸಿದರು.

ಮಳೆ ಹಾನಿ ಪ್ರದೇಶಗಳಿಗೆ ಭೇಟಿ:ನಗರದಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಡಾ.ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯನಗರ, ಮಲ್ಲೇಶ್ವರ, ಪಶ್ಚಿಮ ಕಾರ್ಡ್‌ ರಸ್ತೆಗೆಭೇಟಿ ನೀಡಿ, ಮಳೆಯಿಂದ ಧರೆಗೆ ಉರುಳಿದ ಮರಗಳನ್ನು ವೀಕ್ಷಿಸಿದರು. ನೆಲಕ್ಕುರುಳಿದ ಮರದ ಕೊಂಬೆಗಳನ್ನು ಕೂಡಲೇ ತೆರವುಗೊಳಿಸಿ ಎಂದು ಪಾಲಿಕೆ ಸಿಬ್ಬಂದಿಗೆ ಪರಮೇಶ್ವರ ಸೂಚಿಸಿದರು. ಕೆಲವು ಕಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಬಳಿಕ ಮಾತನಾಡಿದ ಪರಮೇಶ್ವರ, ‘ಎರಡು ದಿನಗಳು ಸುರಿದ ಮಳೆಗೆ ನಗರದಲ್ಲಿ 100ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಅವುಗಳನ್ನು ತೆರವುಗೊಳಿಸಿ, ವಿದ್ಯುತ್ ಲೈನ್‌ ಸರಿಪಡಿಸುವಂತೆ ಸೂಚಿಸಿದ್ದೇನೆ. ಬಿಬಿಎಂಪಿ ಹಾಗೂ ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ‌’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.