ADVERTISEMENT

‌ಬೆಂಗಳೂರು| ಪರಪ್ಪನ ಅಗ್ರಹಾರ ಕೈದಿಗಳಿಗೆ ಡ್ರಗ್ಸ್, ಸಿಗರೇಟ್‌: ವೀಕ್ಷಕ ಸೆರೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:24 IST
Last Updated 6 ಡಿಸೆಂಬರ್ 2025, 14:24 IST
ರಾಹುಲ್ ಪಾಟೀಲ
ರಾಹುಲ್ ಪಾಟೀಲ   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಜಾಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ಸಿಗರೇಟ್‌ ಹಾಗೂ ಡ್ರಗ್ಸ್ ಪೂರೈಸುತ್ತಿದ್ದ ಪ್ರಕರಣದಲ್ಲಿ ಜೈಲಿನ ವೀಕ್ಷಕರೊಬ್ಬರನ್ನು (ವಾರ್ಡನ್) ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಾಹುಲ್‌ ಪಾಟೀಲ ಬಂಧಿತ ಆರೋಪಿ. ‘ಕೈದಿಗಳಿಗೆ ಪೂರೈಸಲು ತಂದಿದ್ದ ಎರಡು ಪ್ಯಾಕ್‌ ಸಿಗರೇಟ್‌ ಹಾಗೂ 60 ಗ್ರಾಂ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಎಚ್‌.ಎ. ಪರಮೇಶ್‌ ಅವರು ಜೈಲರ್‌ ಕಾಂತಪ್ಪ ಪಾಟೀಲ ಅವರ ಮೂಲಕ ನೀಡಿದ ದೂರು ಆಧರಿಸಿ, ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ–2022ರ ಕಲಂ 42ರ ಅನ್ವಯ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 323ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಗೆ ರಾಹುಲ್ ಅವರು 2018ರಲ್ಲಿ ಸೇರಿದ್ದರು. ಆರಂಭದಲ್ಲಿ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡಿದ್ದರು. ಕಳೆದ ಜೂನ್‌ 29ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡಿದ್ದರು. ಡಿ.4ರಂದು ಕಾರಾಗೃಹದ ಪ್ರವೇಶದ್ವಾರದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ರಾಹುಲ್ ಪಾಟೀಲ ಅವರ ಜೇಬಿನಲ್ಲಿ ಎರಡು ಸಿಗರೇಟ್ ಪ್ಯಾಕ್‌ ಹಾಗೂ ಡ್ರಗ್ಸ್ ಪತ್ತೆ ಆಗಿತ್ತು. ಜೈಲಿನ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪರಿಶೀಲನೆ ವೇಳೆ ನಿಷೇಧಿತ ವಸ್ತುಗಳು ಪತ್ತೆ:

ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಶಿವಾನಂದ ಶಿವಾಪುರ ಹಾಗೂ ಜೈಲರ್‌ ಎಚ್.ಎನ್‌.ಅಭಿಷೇಕ್‌ ನೇತೃತ್ವದ ತಂಡವು ಕಳೆದ ವಾರ ವಿವಿಧ ಬ್ಯಾರಕ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ವಿವಿಧ ಬ್ಯಾರಕ್‌ನಲ್ಲಿ 50 ಮೊಬೈಲ್‌ ಫೋನ್‌ಗಳು, 22 ಸಿಮ್ ಕಾರ್ಡ್‌ಗಳು, 5 ಚಾರ್ಜ‌ರ್‌ಗಳು, 4 ಇಯರ್ ಬಡ್ಸ್, ₹49 ಸಾವಿರ ನಗದು, ಚಾಕು ಪತ್ತೆ ಆಗಿದ್ದವು. ಅವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿಯೂ ಬ್ಯಾರಕ್‌ಗಳಲ್ಲಿ ಪರಿಶೀಲನೆ ನಡೆಸಲಾವುದು ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.