ADVERTISEMENT

ಬ್ರಿಟೀಷರ ಹೆಸರಿನ ಸರ್ಕಾರಿ ಸಂಸ್ಥೆ, ರಸ್ತೆಗಳ ಮರುನಾಮಕರಣಕ್ಕೆ ಒತ್ತಾಯ

ಕರ್ನಾಟಕದ ಸ್ವಾತಂತ್ರ್ಯ ವೀರರ ಹೆಸರಿಡಲು ಮುಖ್ಯಮಂತ್ರಿಗೆ ಸಂಸದ ಪಿ.ಸಿ. ಮೋಹನ್ ಪತ್ರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 16:48 IST
Last Updated 25 ಜನವರಿ 2022, 16:48 IST
ಪಿ.ಸಿ. ಮೋಹನ್
ಪಿ.ಸಿ. ಮೋಹನ್   

ಬೆಂಗಳೂರು: ಬ್ರಿಟೀಷರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಕರ್ನಾಟಕದ ಸ್ವಾತಂತ್ರ್ಯ ವೀರರ ಹೆಸರುಗಳನ್ನು ಮರುನಾಮಕರಣ ಮಾಡುವಂತೆ ಸಂಸದ ಪಿ.ಸಿ. ಮೋಹನ್ ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ‘ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗಿವೆ. ಆದರೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳಿಗೆ ಬ್ರಿಟೀಷರು ಆಡಳಿತಾವಧಿಯಲ್ಲಿಟ್ಟ ಹೆಸರುಗಳೇ ಉಳಿದುಕೊಂಡಿವೆ’ ಎಂದು ತಿಳಿಸಿದ್ದಾರೆ.

‘ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿರುವ ಬೌರಿಂಗ್ ಆ್ಯಂಡ್ ಲೇಡಿ ಕರ್ಜನ್ ಆಸ್ಪತ್ರೆಗೆ ಬ್ರಿಟೀಷ್ ಅಧಿಕಾರಿಯ ಹೆಸರು, ಲಾರ್ಡ್ ಕರ್ಜನ್ ಪತ್ನಿ ವಿಕ್ಟೋರಿಯಾ ಕರ್ಜನ್ ಹೆಸರು, ಚಾಮರಾಜಪೇಟೆಯ ಮಿಂಟೋ ಆಸ್ಪತ್ರೆಗೆ ಬ್ರಿಟೀಷ್ ವೈಸ್‌ರಾಯ್ ಆಗಿದ್ದ ಲಾರ್ಡ್ ಮಿಂಟೋ ಹೆಸರು, ‌ವಿಕ್ಟೋರಿಯಾ ಆಸ್ಪತ್ರೆಗೆ ಇಂಗ್ಲೆಂಡ್ ರಾಣಿ ವಿಕ್ಟೋರಿಯಾ ಹೆಸರು ಇಂದಿಗೂ ಉಳಿದುಕೊಂಡಿವೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಅವೆನ್ಯೂ ರಸ್ತೆ, ಲ್ಯಾವೆಲ್ಲೆ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ಹೀಗೆ ಇನ್ನೂ ಅನೇಕ ರಸ್ತೆಗಳು ಬ್ರಿಟೀಷರ ಹೆಸರುಗಳಲ್ಲೇ ಇವೆ. ಬ್ರಿಟೀಷರು ಭಾರತದಲ್ಲಿ ಅಂಚೆ ವ್ಯವಸ್ಥೆ, ರೈಲ್ವೆ ವ್ಯವಸ್ಥೆ ಕಲ್ಪಿಸಿದರು ಎಂದು ಹೇಳಿದರೂ, ಅವೆಲ್ಲವೂ ಭಾರತದ ಸಂಪತ್ತನ್ನು ಬಂದರುಗಳಿಗೆ ಸಾಗಿಸಲು ಮಾಡಲಾದ ವ್ಯವಸ್ಥೆಗಳು. ಸ್ವಾತಂತ್ರ್ಯ ಭಾರತದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ರಸ್ತೆಗಳಲ್ಲಿ ಇಂತಹ ಅಧಿಕಾರಶಾಯಿಗಳ ಹೆಸರು ಉಳಿದುಕೊಂಡಿರುವುದು ಗುಲಾಮಗಿರಿಯ ಸಂಕೇತ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.