ADVERTISEMENT

ಸಂಸದ ಪಿ.ಸಿ.ಮೋಹನ್‌ ಕಂಟೋನ್ಮೆಂಟ್‌ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

₹480 ಕೋಟಿ ವೆಚ್ಚದಲ್ಲಿ ನಿಲ್ದಾಣ ಅಭಿವೃದ್ಧಿ, ವಿಶ್ವದರ್ಜೆಯ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 16:13 IST
Last Updated 7 ನವೆಂಬರ್ 2023, 16:13 IST
ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಸಂಸದ ಪಿ.ಸಿ.ಮೋಹನ್‌ ಅವರು ಮಂಗಳವಾರ ಪರಿಶೀಲಿಸಿದರು.
ಕಂಟೋನ್ಮೆಂಟ್‌ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಸಂಸದ ಪಿ.ಸಿ.ಮೋಹನ್‌ ಅವರು ಮಂಗಳವಾರ ಪರಿಶೀಲಿಸಿದರು.   

ಬೆಂಗಳೂರು: ನಗರದ ಕಂಟೋನ್ಮೆಂಟ್‌ ರೈಲು ನಿಲ್ದಾಣವನ್ನು ₹480 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಸಂಸದ ಪಿ.ಸಿ.ಮೋಹನ್‌ ಅವರು ಮಂಗಳವಾರ ಕಾಮಗಾರಿ ಪರಿಶೀಲಿಸಿದರು.

ಕಾಮಗಾರಿ ತ್ವರಿತಗೊಳಿಸುವಂತೆ ಗುತ್ತಿಗೆದಾರರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘2022ರ ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಪೂರ್ಣಗೊಂಡ ಮೇಲೆ ಕಂಟೋನ್ಮೆಂಟ್ ನಿಲ್ದಾಣ ಹೈಟೆಕ್‌ ಆಗಲಿದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ದೊರೆಯಲಿವೆ’ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಈ ನಿಲ್ದಾಣವು ಉಪ ನಗರ ರೈಲು ಹಾಗೂ ದೂರಕ್ಕೆ ತೆರಳುವ ರೈಲುಗಳ ಸಂಪರ್ಕ ಕೊಂಡಿ ಆಗಲಿದೆ. ವಸಂತನಗರ ಕಡೆಯಿಂದ ಮುಖ್ಯಪ್ರವೇಶ ದ್ವಾರ ಹಾಗೂ ಮಿಲ್ಲರ್ಸ್‌ ರಸ್ತೆಯಿಂದ ಎರಡನೇ ಪ್ರವೇಶ ದ್ವಾರ ಹೊಂದಿದೆ. ಪ್ರಸ್ತುತ 25 ಸಾವಿರ ಚದರ ಅಡಿಯಲ್ಲಿ ನಿಲ್ದಾಣವಿದೆ. ಇದಕ್ಕೆ 75 ಸಾವಿರ ಚದರ ಅಡಿ ಜಾಗವನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡು 1 ಲಕ್ಷ ಚದರ ಅಡಿಯಲ್ಲಿ ವಿಶ್ವದರ್ಜೆ ಗುಣಮಟ್ಟದ ನಿಲ್ದಾಣ ನಿರ್ಮಿಸಲಾಗುತ್ತಿದೆ. ಹವಾನಿಯಂತ್ರಣ ಕೊಠಡಿ, ಹೆಚ್ಚಿನ ಟಿಕೆಟ್‌ ಕೌಂಟರ್‌ಗಳು, ಚಾವಣಿಗೆ ಸೋಲಾರ್‌ ಅಳವಡಿಕೆ ಮಾಡಲಾಗುತ್ತಿದೆ. ಬಹುಮಹಡಿ ವಾಹನ ಪಾರ್ಕಿಂಗ್‌ ಸೌಲಭ್ಯವುಳ್ಳ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡದಲ್ಲಿ 1 ಸಾವಿರ ಕಾರು ಹಾಗೂ 1 ಸಾವಿರ ಬೈಕ್‌ಗಳ ನಿಲುಗಡೆಗೆ ವ್ಯವಸ್ಥೆ ಆಗಲಿದೆ’ ಎಂದು ಹೇಳಿದರು.

‘ಪ್ರಯಾಣಿಕರ ಅನುಕೂಲಕ್ಕೆ ರೈಲು ನಿಲ್ದಾಣದ ಎದುರು ಬಿಎಂಟಿಸಿ ಫೀಡರ್‌ ಬಸ್‌ಗಳಿಗೆ ‘ಬಸ್‌ ಬೇ’ ನಿರ್ಮಿಸುವಂತೆ ಸೂಚನೆ ನೀಡಿದ್ದೇನೆ. ಜತೆಗೆ, ಉಪ ನಗರ ರೈಲು ಯೋಜನೆಗಾಗಿಯೇ ನಾಲ್ಕು ಪ್ರತ್ಯೇಕ ಫ್ಲಾಟ್‌ಫಾರಂ ನಿರ್ಮಿಸಲಾಗುತ್ತಿದೆ. ರೈಲು ನಿಲ್ದಾಣದಿಂದ ಬಂಬೂ ಬಜಾರ್‌ ಮೆಟ್ರೊ ನಿಲ್ದಾಣಕ್ಕೆ ವಾಕ್‌ವೇ ನಿರ್ಮಿಸಲಾಗುತ್ತಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳು ಪ್ರಥಮ ಹಂತದ ಕೆಲಸ ಆರಂಭಿಸಿದ್ಧಾರೆ. ವಾಕ್‌ವೇ ಸಂಪರ್ಕಿಸಲು ಎಲ್ಲ ಫ್ಲಾಟ್‌ಫಾರಂಗೆ ಹೆಚ್ಚುವರಿ ಎಫ್‌ಒಬಿ ಸ್ಥಾಪಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.