ADVERTISEMENT

ಪಡಿತರ ಕಳ್ಳಸಾಗಣೆ: ನಾಲ್ಕು ಲಾರಿ ವಶ

ಆಹಾರ ಇಲಾಖೆ ಜಾಗೃತ ದಳದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:42 IST
Last Updated 22 ಅಕ್ಟೋಬರ್ 2021, 19:42 IST
ಯಲಚೇನಹಳ್ಳಿ ಬಳಿ ಶುಕ್ರವಾರ ವಶಪಡಿಸಿಕೊಂಡ ಪಡಿತರ ಧಾನ್ಯ ತುಂಬಿದ ಲಾರಿಗಳೊಂದಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯಮಟ್ಟದ ಜಾಗೃತ ದಳದ ಮುಖ್ಯಸ್ಥ ಡಾ.ರಾಮೇಶ್ವರಪ್ಪ ಮತ್ತು ತಂಡ
ಯಲಚೇನಹಳ್ಳಿ ಬಳಿ ಶುಕ್ರವಾರ ವಶಪಡಿಸಿಕೊಂಡ ಪಡಿತರ ಧಾನ್ಯ ತುಂಬಿದ ಲಾರಿಗಳೊಂದಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ರಾಜ್ಯಮಟ್ಟದ ಜಾಗೃತ ದಳದ ಮುಖ್ಯಸ್ಥ ಡಾ.ರಾಮೇಶ್ವರಪ್ಪ ಮತ್ತು ತಂಡ   

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗಬೇಕಿದ್ದ ಪಡಿತರ ಅಕ್ಕಿ, ರಾಗಿಯನ್ನು ಮಾರ್ಗ ಮಧ್ಯದಲ್ಲೇ ವಾಹನ ಬದಲಿಸಿ ಕಾಳಸಂತೆಗೆ ಸಾಗಿಸಲು ಯತ್ನಿಸುತ್ತಿದ್ದ ಪ್ರಕರಣ ಪತ್ತೆಹಚ್ಚಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ರಾಜ್ಯಮಟ್ಟದ ಜಾಗೃತ ದಳ, ನಾಲ್ಕು ಲಾರಿ, 50 ಚೀಲ ಅಕ್ಕಿ ಹಾಗೂ 300 ಕ್ವಿಂಟಲ್‌ ರಾಗಿಯನ್ನು ವಶಪಡಿಸಿಕೊಂಡಿದೆ.

ನಗರದ ಯಲಚೇನಹಳ್ಳಿ ಮೆಟ್ರೊ ರೈಲು ನಿಲ್ದಾಣಕ್ಕೆ ಸಮೀಪದಲ್ಲಿರುವ ದೊಡ್ಡಮನೆ ಕೈಗಾರಿಕಾ ಪ್ರದೇಶದಲ್ಲಿ ಪಡಿತರ ಸಾಗಣೆ ಲಾರಿಗಳಿಂದ ಬೇರೆ ವಾಹನಗಳಿಗೆ ಪಡಿತರ ಧಾನ್ಯ ತುಂಬಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಜಾಗೃತ ದಳದ ಮುಖ್ಯಸ್ಥ ಡಾ.ಕೆ. ರಾಮೇಶ್ವರಪ್ಪ ನೇತೃತ್ವದ ತಂಡ, ನಾಲ್ಕು ಲಾರಿ ಹಾಗೂ ಆಹಾರ ಧಾನ್ಯಗಳನ್ನು ವಶಪಡಿಸಿಕೊಂಡಿದೆ.

‘ನ್ಯಾಯಬೆಲೆ ಅಂಗಡಿಗಳಿಗೆ ತಲುಪಬೇಕಿದ್ದ ಪಡಿತರ ಧಾನ್ಯವನ್ನು ಶ್ರೀನಿವಾಸ್‌ ಎಂಬುವವರು ಪ್ರದೀಪ್‌ ಕುಮಾರ್‌ ಮತ್ತು ನಯಾಜ್‌ ಎಂಬುವವರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಈ ಇಬ್ಬರೂ ಪಡಿತರ ಅಕ್ಕಿ ಮತ್ತು ರಾಗಿಯನ್ನು ಕಾಳಸಂತೆಗೆ ಸಾಗಿಸಲು ಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ’ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ವಶಪಡಿಸಿಕೊಳ್ಳಲಾದ ಲಾರಿಗಳು ಶಬ್ಬೀರ್‌ ಅಹಮ್ಮದ್, ಯತೀಶ್‌ ಕುಮಾರ್‌, ಚಾಂದ್‌ ಪಾಷ ಮತ್ತು ಲಕ್ಷ್ಮೀನರಸಿಂಹಯ್ಯ ಎಂಬುವವರಿಗೆ ಸೇರಿದವು. ಪಡಿತರ ಧಾನ್ಯಗಳ ಮಾದರಿ ಸಂಗ್ರಹಿಸಲಾಗಿದೆ. ಎಲ್ಲರ ವಿರುದ್ಧವೂ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಪಡಿತರ ನಿರ್ವಹಣೆ ಆದೇಶಗಳ ಅಡಿಯಲ್ಲಿ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರ ವಿರುದ್ಧ ಎಫ್‌ಐಆರ್‌: ಪಡಿತರ ಧಾನ್ಯ ಕಳ್ಳಸಾಗಣೆಯ ಮತ್ತೊಂದು ಪ್ರಕರಣ ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಪತ್ತೆಯಾಗಿದ್ದು, ಮೌಲಾ ಮತ್ತು ನಯಾಜ್‌ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯ ಸ್ಥಳವೊಂದರಲ್ಲಿ ಪಡಿತರ ಧಾನ್ಯಗಳ ಚೀಲವನ್ನು ಬೇರೆ ವಾಹನಕ್ಕೆ ತುಂಬಿಸಿ ಸಾಗಿಸುತ್ತಿರುವ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಪೊಲೀಸರು ಲಾರಿ ಸಮೇತ ಪಡಿತರ ಧಾನ್ಯ ವಶಕ್ಕೆ ಪಡೆದಿದ್ದರು. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.