ಬೆಂಗಳೂರು: ಬೆಳಿಗ್ಗೆ 9ರಿಂದ 10.30ರ ನಡುವೆ ಪ್ರಯಾಣಿಕರ ದಟ್ಟಣೆ ವಿಪರೀತ ಹೆಚ್ಚು ಇರುವ ಕಾರಣ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣ–ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ನಡುವಿನ ಮೆಟ್ರೊ ರೈಲು ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ.
‘ಈ ಅವಧಿಯಲ್ಲಿ ಮೆಜೆಸ್ಟಿಕ್– ಬೈಯಪ್ಪನಹಳ್ಳಿ ನಡುವೆ ಟ್ರಿಪ್‌ಗಳ ಸಂಖ್ಯೆಯನ್ನು 9ರಿಂದ 11ಕ್ಕೆ ಹೆಚ್ಚಿಸಲಾಗುತ್ತಿದ್ದು, ಸರಾಸರಿ 3 ನಿಮಿಷಗಳಿಗೊಂದು ರೈಲು ಲಭ್ಯವಾಗಲಿದೆ’ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಸ್.ಯಶವಂತ ಚವ್ಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಹಿಂದೆ ಮೆಜೆಸ್ಟಿಕ್– ಬೈಯಪ್ಪನಹಳ್ಳಿ ನಡುವೆ ಆರು ಬೋಗಿಗಳ ಒಂದು ರೈಲು ಸಂಚರಿಸುತ್ತಿತ್ತು. ಅದು ಇನ್ನು ಮೈಸೂರು ರಸ್ತೆಯಿಂದಲೇ ಸಂಚಾರ ಆರಂಭಿಸಲಿದೆ. ಇದರಿಂದಾಗಿ ಎರಟು ಟರ್ಮಿನಲ್ ನಿಲ್ದಾಣಗಳ ನಡುವೆ ಆರು ಬೋಗಿಗಳ ರೈಲಿನ ಟ್ರಿಪ್‌ಗಳ ಸಂಖ್ಯೆ 4ರಿಂದ 5ಕ್ಕೆ ಹೆಚ್ಚಳವಾಗಲಿದೆ. ಇದರಿಂದ ಮೈಸೂರು ರಸ್ತೆ– ಮೆಜೆಸ್ಟಿಕ್ ನಡುವೆ ಪ್ರಯಾಣಿಕರ ದಟ್ಟಣೆ ಕಡಿಮೆ ಆಗಲಿದೆ. ಈ ಹಿಂದೆ ದಟ್ಟಣೆ ಅವಧಿಯಲ್ಲಿ ಮೈಸೂರು ರಸ್ತೆಯಿಂದ ಪ್ರತಿ 4 ನಿಮಿಷಕ್ಕೊಂದು ರೈಲು ಹೊರಡುತ್ತಿತ್ತು. ಇನ್ನು ಪ್ರತಿ 5 ನಿಮಿಷಕ್ಕೊಂದು ರೈಲು ಹೊರಡಲಿದೆ’ ಎಂದು ಅವರು ವಿವರಿಸಿದರು.
‘ಹೊಸ ವೇಳಾಪಟ್ಟಿಯನ್ನು ಸೋಮವಾರ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಇದರಿಂದ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಆಗಿದೆ. ಹಾಗಾಗಿ ಇದೇ ವ್ಯವಸ್ಥೆಯನ್ನು ಮುಂದುವರಿಸಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.