
ಪೀಣ್ಯ ದಾಸರಹಳ್ಳಿ: ಅಡ್ಡಾದಿಡ್ಡಿ ಸಂಚರಿಸುವ ಬಸ್‌ಗಳು, ಜೀವ ಕೈಯಲ್ಲಿ ಹಿಡಿದುಕೊಂಡು ಬಸ್ ಹತ್ತಲು ಹರಸಾಹಸ ಪಡುವ ಪ್ರಯಾಣಿಕರು, ಪಾದಚಾರಿ ಮಾರ್ಗ ಇಲ್ಲದೇ ಪರದಾಡುವ ಜನರು, ನಿಂತುಕೊಳ್ಳಲು ಆಗದೇ ಅತ್ತ ರಸ್ತೆ ದಾಟಲು ಹರಸಾಹಸ ಪಡುವ ಸಾರ್ವಜನಿಕರು....
– ಇದು ಪೀಣ್ಯ ಎರಡನೇ ಹಂತದ ಬಸ್ ನಿಲ್ದಾಣದ ಸಮಸ್ಯೆಗಳ ನೋಟ.
ಬಿಎಂಟಿಸಿ ಬಸ್ ನಿಲ್ದಾಣವು ಪೀಣ್ಯ 2ನೇ ಹಂತದಲ್ಲಿದೆ. ಪ್ರತಿನಿತ್ಯ ನೂರಾರು ಬಿಎಂಟಿಸಿ ಬಸ್‌ಗಳು ಸಂಚರಿಸುತ್ತವೆ. ಅಷ್ಟೇ ಅಲ್ಲದೆ, ರಾತ್ರಿ ವೇಳೆ ಬಸ್‌ಗಳು ಕೂಡ ಇಲ್ಲೇ ತಂಗುತ್ತವೆ. ಆದರೆ, ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ರಸ್ತೆ ಮಧ್ಯೆ ನಿಂತು ಬಸ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
‘ಪೀಣ್ಯ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ನೆಲಮಂಗಲ, ಕೆಂಗೇರಿ, ಶಿವಾಜಿನಗರ, ಯಲಹಂಕ, ಕೆ.ಆರ್.ಪುರ ಸೇರಿದಂತೆ ನಗರದ ಎಲ್ಲಾ ಭಾಗಗಳಿಗೂ ಬಸ್‌ಗಳು ಸಂಚರಿಸುತ್ತವೆ. ಆದರೂ ವ್ಯವಸ್ಥಿತ ಬಸ್ ನಿಲ್ದಾಣ ಇಲ್ಲಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಸಂಚಾರ ಕಿರಿಕಿರಿ: ಬಸ್ ನಿಲ್ದಾಣದ ಮೂರು ಕಡೆ ಕೂಡುವ ರಸ್ತೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಮಸ್ಯೆಯೂ ಆಗುತ್ತಿದೆ. ಇದರಿಂದ ಪ್ರಯಾಣಿಕರು ಕಚೇರಿಗೆ ಹೋಗುವುದು ವಿಳಂಬವಾಗುತ್ತಿದೆ. ಅಲ್ಲದೆ ಸಂಜೆ ಮನೆ ತಲುಪುವುದು ತಡವಾಗುತ್ತಿದೆ.
ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂಬ ಖ್ಯಾತಿ ಪಡೆದಿರುವ ಇಲ್ಲಿಗೆ ರಾಜ್ಯ ಮಾತ್ರವಲ್ಲದೇ ದೇಶದ ಬೇರೆ ಕಡೆಯಿಂದಲೂ ಜನರು ಉದ್ಯೊಗ ಅರಸಿ ಬರುತ್ತಾರೆ. ಕೆಲವರು ಪೀಣ್ಯ ಭಾಗದಲ್ಲಿ ನೆಲಸಿದ್ದಾರೆ. ಬಹುಪಾಲು ಕಾರ್ಮಿಕರು ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ನಿತ್ಯ ಕಷ್ಟದಿಂದಲೇ ಇಲ್ಲಿಂದ ಸಂಚರಿಸುತ್ತಾರೆ.
ಇಲ್ಲಿನ ರಸ್ತೆ ಬದಿಯಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಬಸ್ ನುಗ್ಗಿದ್ದರಿಂದ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಉದಾಹರಣೆ ಇದೆ.
‘ಪಕ್ಕದಲ್ಲೇ ಖಾಲಿ ಇರುವ 4 ಎಕರೆ ಸರ್ಕಾರಿ ಜಾಗದಲ್ಲಿ ಬಿಎಂಟಿಸಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಿಸಿ’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಾದಚಾರಿ ಮಾರ್ಗವನ್ನು ಸಣ್ಣ ಪುಟ್ಟ ವ್ಯಾಪಾರಿಗಳು ಆಕ್ರಮಿಸಿಕೊಂಡು ನಿಲ್ಲಲು ಸ್ಥಳವಕಾಶವಿಲ್ಲದಾಗಿದೆ. ಮೂರು ಕಡೆಗಳಿಂದ ವಾಹನ ಬರುವ ಕಾರಣ ದಾಟಲು ಹರಸಾಹಸಪಡಬೇಕಾಗಿದೆಕೆ.ಜಿ.ಕುಮಾರ್, ಅಧ್ಯಕ್ಷ, ಹಸಿರು ಪ್ರತಿಷ್ಠಾನ
ಜವಳಿ ಇಲಾಖೆಯ ಪ್ರಿಯದರ್ಶಿನಿ ಕೈಮಗ್ಗ ವಿಭಾಗಕ್ಕೆ ರಾಜ್ಯ ಸರ್ಕಾರ ಮಂಜೂರು ಮಾಡಿದ ಜಾಗವನ್ನು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಸಾರಿಗೆ ನಿಗಮಕ್ಕೆ ನೀಡುವಂತೆ ಸಚಿವ ಶಿವಾನಂದ ಪಾಟೀಲರಿಗೆ ಮನವಿ ಮಾಡಿದ್ದೇವೆದಾನಪ್ಪ, ಅಧ್ಯಕ್ಷ, ಪೀಣ್ಯ ಕೈಗಾರಿಕಾ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.