ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ–4ರ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಬೆಂಗಳೂರು ಸಂಚಾರ ಪೊಲೀಸರು ಹಸಿರು ನಿಶಾನೆ ತೋರಿದ್ದಾರೆ.
ಜುಲೈ 29ರಿಂದ(ಸೋಮವಾರ) ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನಗಳ ಸಂಚಾರ ಆರಂಭಗೊಳ್ಳಲಿದೆ. ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಬಳಿಕ ಈ ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ಅವಕಾಶ ಸಿಗುತ್ತಿದ್ದು, ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ಸಮಸ್ಯೆ ಸ್ವಲ್ಪ ಮಟ್ಟಿಗೆ ತಗ್ಗುವ ಸಾಧ್ಯತೆಯಿದೆ.
240 ಕೇಬಲ್‌ಗಳ ಬದಲಾವಣೆ ಕಾಮಗಾರಿ ಮುಕ್ತಾಯವಾಗಿ ಆರು ತಿಂಗಳು ಕಳೆದಿದ್ದರೂ ಭಾರಿ ವಾಹನ ಸಂಚಾರಕ್ಕೆ ಎನ್‌ಎಚ್‌ಎಐ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇದರಿಂದ ದಟ್ಟಣೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ವಾರದಲ್ಲಿ ಆರು ದಿನ ಎಲ್ಲ ಮಾದರಿಯ ವಾಹನಗಳು ಸಂಚರಿಸಲು ಅವಕಾಶ ಸಿಕ್ಕಿದೆ.
ಶುಕ್ರವಾರ ಲಘು ವಾಹನ ಸಂಚಾರ:
ಮೇಲ್ಸೇತುವೆ 4 ಕಿ.ಮೀ. ಉದ್ದವಿದ್ದು, 1 ಕಿ.ಮೀನಲ್ಲಿ ಮಾತ್ರ 240 ಕೇಬಲ್ ಬದಲಾವಣೆ ಮಾಡಲಾಗಿದೆ. ಈ ಭಾಗದ ಸ್ಪ್ಯಾನ್‌ಗಳಲ್ಲಿ ಸಾಮರ್ಥ್ಯ ಹೆಚ್ಚಾಗಿದೆ. ಉಳಿದ ಸ್ಪ್ಯಾನ್‌ಗಳಲ್ಲಿ ಎರಡು ಸಾವಿರ ಕೇಬಲ್ ಬದಲಾವಣೆ ಕಾಮಗಾರಿ ಪ್ರಗತಿಯಲ್ಲಿದೆ. ಕೇಬಲ್ ಬದಲಾವಣೆ ಆದ ಮೇಲೆ ಕಾಂಕ್ರೀಟ್ ಭರ್ತಿ ಮಾಡಬೇಕಿದ್ದು, ಆಗ ಮೇಲ್ಸೇತುವೆಯಲ್ಲಿ ಟ್ರಕ್, ಬಸ್‌ಗಳ ಸಂಚಾರ ಇರಬಾರದು. ವಾರದಲ್ಲಿ ಒಂದು ದಿನ ಭಾರಿ ವಾಹನ ಸಂಚಾರ ಬಂದ್ ಮಾಡಿ ಕಾಮಗಾರಿ ನಡೆಸಲಾಗುವುದು. ಅದಕ್ಕಾಗಿ ಪ್ರತಿ ಶುಕ್ರವಾರ ಬೆಳಿಗ್ಗೆ 6ರಿಂದ ಶನಿವಾರ ಬೆಳಿಗ್ಗೆ 6ರ ತನಕ ಮೇಲ್ಸೇತುವೆಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ಇರಲಿದೆ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಕೆನ್ನಮೆಟಲ್(ವಿಡಿಯಾ)ದಿಂದ ಪೀಣ್ಯದವರೆಗೆ ಎರಡೂ ಬದಿಗಳಲ್ಲಿ ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸುವಂತೆ ಸವಾರರಿಗೆ ಸೂಚನೆ ನೀಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ನಗರದಲ್ಲಿರುವ ಅತ್ಯಂತ ಉದ್ದನೆಯ ಮೇಲ್ಸೇತುವೆಗಳಲ್ಲಿ ಇದೂ ಒಂದಾಗಿದೆ. ಹೊರ ರಾಜ್ಯ ಸೇರಿದಂತೆ ಹಲವು ಜಿಲ್ಲೆಗಳ ಸಂಪರ್ಕ ಕೊಂಡಿ ಈ ಮಾರ್ಗ. ಮೇಲ್ಸೇತುವೆಯ 8ನೇ ಮೈಲಿನ ಜಂಕ್ಷನ್ ಸಮೀಪದ 102 ಹಾಗೂ 103ನೇ ಪಿಲ್ಲರ್‌ನಲ್ಲಿ ಕೇಬಲ್‌ಗಳು ಬಾಗಿದ್ದರಿಂದ 2021ರ ಡಿಸೆಂಬರ್‌ನಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ನಂತರ, ತಜ್ಞರ ಅನುಮತಿ ಪಡೆದು, ಭಾರಿ ವಾಹನಗಳ ಸಂಚಾರ ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಕೆಳಭಾಗದ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುತ್ತಿದ್ದವು. ಇದರಿಂದ ಮಾರ್ಗದ ಉದ್ದಕ್ಕೂ ವಾಹನ ದಟ್ಟಣೆ ಉಂಟಾಗುತ್ತಿತ್ತು. ಆಂಬುಲೆನ್ಸ್‌ಗಳೂ ಜಂಕ್ಷನ್‌ಗಳಲ್ಲಿ ಸಿಲುಕಿಕೊಳ್ಳುತ್ತಿದ್ದವು.
ಕಳೆದ ವರ್ಷ ಕೇಬಲ್‌ಗಳ ಬದಲಾವಣೆ ಮಾಡಿ, ಮೇಲ್ಸೇತುವೆ ಸಾಮರ್ಥ್ಯ ಹೆಚ್ಚಿಸಲಾಗಿದೆ. ಟ್ರಕ್‌ಗಳಲ್ಲಿ ಮಣ್ಣು ಹೇರಿ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಲಾಗಿದೆ. ಮೇಲ್ಸೇತುವೆ ಭದ್ರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಭಾರಿ ವಾಹನಗಳು ಮೇಲ್ಸೇತುವೆಯ ಎಡಪಥದಲ್ಲಿ ನಿಗದಿತ ವೇಗದಲ್ಲಿ ಮಾತ್ರ ಚಲಿಸಬೇಕು.–ಎಂ.ಎನ್.ಅನುಚೇತ್ ಜಂಟಿ ಕಮಿಷನರ್ ಸಂಚಾರ ವಿಭಾಗ
ಈಗಾಗಲೇ 29 ಸ್ಪ್ಯಾನ್‌ಗಳಲ್ಲಿ ಹೊಸ ಕೇಬಲ್ ಅಳವಡಿಕೆ ಪೂರ್ಣಗೊಳಿಸಲಾಗಿದೆ. ಉಳಿದ 91 ಸ್ಪ್ಯಾನ್‌ಗಳಲ್ಲಿ ಕೇಬಲ್ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ.– ಚಂದ್ರಕಿಶನ್ ಮೇಲ್ಸೇತುವೆ ಅಧ್ಯಯನ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.