ADVERTISEMENT

₹ 10 ಲಕ್ಷ ಪರಿಹಾರಕ್ಕೆ ಆದೇಶ

ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:25 IST
Last Updated 15 ಆಗಸ್ಟ್ 2019, 19:25 IST
.
.   

ಬೆಂಗಳೂರು: ‘ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಗೆ ವೈದ್ಯಕೀಯ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಆಕೆ ಸಾವಿಗೀಡಾಗಿದ್ದಾರೆ’ ಎಂಬ ಆರೋಪದ ಮೇರೆಗೆ ನಗರದ ಎ.ವಿ.ಆಸ್ಪತ್ರೆಯು ದೂರುದಾರರಿಗೆ ₹ 10.90 ಲಕ್ಷ ಪರಿಹಾರ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

‌ಜೆ.ಪಿ ನಗರ ಮೊದಲನೇ ಹಂತದ ನಿವಾಸಿಗಳಾದ ಮೃತ ಮಹಿಳೆಯ ಪತಿ ಎ.ಎಸ್.ದೊರೈ ಸಿಂಗಂ ಮತ್ತು ಅವರ ಇಬ್ಬರು ಮಕ್ಕಳು ಸಲ್ಲಿಸಿದ್ದ ದೂರನ್ನು ಆಯೋಗದ ನ್ಯಾಯಾಧೀಶರಾದ ಎಸ್‌.ಎಲ್.ಪಾಟೀಲ ಮತ್ತು ಪಿ.ಕೆ.ಶಾಂತ ವಿಲೇವಾರಿ ಮಾಡಿದ್ದಾರೆ.

ದೂರನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಧೀಶರು, ‘ಗ್ರಾಹಕ ಸಂರಕ್ಷಣಾ ಕಾಯ್ದೆ–1986ರ ಕಲಂ 12ರ ಅಡಿಯಲ್ಲಿ ಸಲ್ಲಿಸಲಾಗಿರುವ ಈ ದೂರಿನಲ್ಲಿ ವೈದ್ಯರ ನಿರ್ಲಕ್ಷ್ಯವನ್ನು ಸಾಬೀತುಪಡಿಸುವ ಅಂಶಗಳು ಕಂಡು ಬಂದಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ಸೇವಾ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿದ್ದ ಬಸವನಗುಡಿಯ ಪಟ್ಟಾಲಮ್ಮ ದೇವಸ್ಥಾನ ರಸ್ತೆಯಲ್ಲಿರುವ ಎ.ವಿ.ಆಸ್ಪತ್ರೆ ಮತ್ತು ಇದರ ಪಾಲುದಾರರಾದ ಡಾ.ಎಂ.ರಮೇಶ್‌ ಹಾಗೂ ಡಾ.ಸರಸ್ವತಿ ರಮೇಶ್‌ ಅವರು ದೂರುದಾರರಿಗೆ ₹ 10.90 ಲಕ್ಷವನ್ನು ಪರಿಹಾರ ರೂಪವಾಗಿ ನಾಲ್ಕು ವಾರಗಳ ಒಳಗೆ ನೀಡಬೇಕು. ಈ ಮೊತ್ತವನ್ನು ನೋಟಿಸ್ ನೀಡಿದ ದಿನದಿಂದ ಪರಿಹಾರ ಘೋಷಿಸಿದ ದಿನದವರೆಗೆ ವಾರ್ಷಿಕ ಶೇ 18ರ ಬಡ್ಡಿಯಂತೆ ಪಾವತಿಸಬೇಕು. ಅಂತೆಯೇ ವ್ಯಾಜ್ಯದ ಖರ್ಚು ₹ 5 ಸಾವಿರವನ್ನೂ ದೂರುದಾರರಿಗೆ ನೀಡಬೇಕು’ ಎಂದು ಆದೇಶಿಸಲಾಗಿದೆ.

ಪ್ರಕರಣವೇನು?: ‘ಕಾಮಾಕ್ಷಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ 2002ರ ಫೆಬ್ರುವರಿ 7ರಂದು ಎ.ವಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಕಾಮಾಕ್ಷಿ ಅವರು ಗರ್ಭಕೋಶದ ಫೈಬ್ರಾಯಿಡ್‌ ಗೆಡ್ಡೆ ಮತ್ತು ಹರ್ನಿಯಾದಿಂದ ಬಳಲುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮೂರು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ತೀವ್ರ ರಕ್ತಸ್ರಾವಕ್ಕೆ ಒಳಗಾದ ಕಾಮಾಕ್ಷಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ದಿನದಂದೇ ಮೃತಪಟ್ಟಿದ್ದಾರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ’ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.