ADVERTISEMENT

ಪಿಂಚಣಿ: ಪ್ರಮಾಣ ಪತ್ರಕ್ಕೆ ಒತ್ತಾಯಿಸಿಲ್ಲ -ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 18:55 IST
Last Updated 28 ಜೂನ್ 2021, 18:55 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಪಿಂಚಣಿದಾರರು ತಾವು ಜೀವಂತವಾಗಿರುವ ಕುರಿತು ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಒತ್ತಡ ಹೇರಿಲ್ಲ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಈ ಸಂಬಂಧ ಅಫಿಡವಿಟ್‌ ಸಲ್ಲಿಸಿದ ಕಂದಾಯ ಇಲಾಖೆ ಉಪ ನಿರ್ದೇಶಕಿ (ಸಾಮಾಜಿಕ ಭದ್ರತೆ ಮತ್ತು ಪಿಂಚಣಿ) ಡಾ. ಎಸ್. ಸವಿತಾ ಅವರು, ‘ಪ್ರಮಾಣ ಪತ್ರಕ್ಕೆ ಒತ್ತಾಯ ಮಾಡುತ್ತಿಲ್ಲ. ಅಲ್ಲದೇ, ಹಿರಿಯ ನಾಗರಿಕರಿಗೆ 2021ರ ಮೇ 31ರ ತನಕದ ಪಿಂಚಣಿ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ’ ಎಂದು ವಿವರಿಸಿದರು.

‘ಪಿಂಚಣಿದಾರರನ್ನು ಸ್ವಯಂ ಪ್ರೇರಿತವಾಗಿ ಗುರುತಿಸಲು ‘ನವೋದಯ’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಲೆಕ್ಕಿಗರು ಫಲಾನುಭವಿಗಳ ಮನೆ ಬಾಗಿಲಿಗೆ ಭೇಟಿ ನೀಡಿ ಅವರ ಭಾವಚಿತ್ರ ಸಹಿತ ಮಾಹಿತಿಗಳನ್ನು ಸಂಗ್ರಹಿಸಿ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪಿಂಚಣಿದಾರರು ಬದುಕಿರುವ ಬಗ್ಗೆ ಪ್ರತಿವರ್ಷ ಪ್ರಮಾಣ ಪತ್ರ ಸಲ್ಲಿಸಬೇಕು ಮತ್ತು ಬ್ಯಾಂಕ್‌ಗಳಿಗೆ ಹಾಜರಾಗಬೇಕು. ಹಿರಿಯ ನಾಗರಿಕರನ್ನು ಬ್ಯಾಂಕ್ ಮತ್ತು ಕಚೇರಿಗಳಿಗೆ ಸುತ್ತಾಡಿಸುವುದು ಸರಿಯೇ’ ಎಂದು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಬಗ್ಗೆ ಅಫಿಡವಿಟ್‌ ಸಲ್ಲಿಸಬೇಕು’ ಎಂದು ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.