ADVERTISEMENT

ಐಸ್ ಕ್ರೀಂ ಖರೀದಿಗೆ ಹಿಂದೇಟು

ಪಾರ್ಸೆಲ್‍ಗೆ ಅವಕಾಶವಿದ್ದರೂ ಅಂಗಡಿಗಳತ್ತ ಸುಳಿಯದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 2:38 IST
Last Updated 25 ಏಪ್ರಿಲ್ 2020, 2:38 IST
ಶ್ರೀನಗರದ ಅಂಗಡಿಯೊಂದರಲ್ಲಿ ಗ್ರಾಹಕನೊಬ್ಬ ಐಸ್‍ಕ್ರೀಂ ಖರೀದಿಸುತ್ತಿದ್ದ ದೃಶ್ಯ ಶುಕ್ರವಾರ ಕಂಡು ಬಂತು.
ಶ್ರೀನಗರದ ಅಂಗಡಿಯೊಂದರಲ್ಲಿ ಗ್ರಾಹಕನೊಬ್ಬ ಐಸ್‍ಕ್ರೀಂ ಖರೀದಿಸುತ್ತಿದ್ದ ದೃಶ್ಯ ಶುಕ್ರವಾರ ಕಂಡು ಬಂತು.   

ಬೆಂಗಳೂರು: ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿ, ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಜ್ಯೂಸ್ ಹಾಗೂ ಐಸ್ ಕ್ರೀಂ ಮಾರಾಟಕ್ಕೆ ಸರ್ಕಾರ ಅವಕಾಶ ಕಲ್ಪಿಸಿದ್ದರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ. ವ್ಯಾಪಾರಿಗಳು ಪ್ರಾಯೋಗಿಕವಾಗಿ ಅಂಗಡಿಗಳನ್ನು ತೆರೆದಿದ್ದು, ಗ್ರಾಹಕರಿಲ್ಲದ ಕಾರಣ ಮುಚ್ಚುವುದೇ ಒಳಿತು ಎಂದು ಅಳಲು ತೋಡಿಕೊಂಡಿದ್ದಾರೆ.

ಲಾಕ್‍ಡೌನ್ ಸಡಿಲಿಕೆ ಕುರಿತು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಗುರುವಾರ ಹೊರಡಿಸಿದ ಆದೇಶದನ್ವಯ ಜ್ಯೂಸ್ ಮತ್ತು ಐಸ್ ಕ್ರೀಂ ಅನ್ನು ಗ್ರಾಹಕರು ಖರೀದಿಸಿ, ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದೆ. ಇದರಂತೆ ನಗರದ ಕೆಲವೆಡೆ ಜ್ಯೂಸ್ ಮತ್ತು ಐಸ್ ಕ್ರೀಂ ಮಾರಾಟ ಮಳಿಗೆಗಳನ್ನು ಶುಕ್ರವಾರ ತೆರೆಯಲಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದ ಗ್ರಾಹಕರು ಖರೀದಿಗೆ ಮುಂದಾಗಲಿಲ್ಲ.

ಬೇಸಿಗೆ ಧಗೆಯಿಂದ ಜನ ತಂಪು ಪಾನೀಯ, ಹಣ್ಣಿನ ಜ್ಯೂಸ್ ಹಾಗೂ ಐಸ್‍ಕ್ರೀಂ ಸವಿಯಲು ಅಂಗಡಿಗಳ ಮುಂದೆ ಮುಗಿ ಬೀಳುತ್ತಾರೆ. ಇದಕ್ಕಾಗಿ ನಗರದಲ್ಲಿ ಪ್ರತ್ಯೇಕವಾಗಿ ಐಸ್‍ಕ್ರೀಂ ಪಾರ್ಲರ್ ಹಾಗೂ ಜ್ಯೂಸ್ ಕಾರ್ನರ್‌ಗಳಿವೆ. ಆದರೆ, ಕೊರೊನಾ ಸೋಂಕಿನ ಕರಿನೆರಳು ಈ ವಹಿವಾಟಿನ ಮೇಲೂ ಪರಿಣಾಮ ಬೀರಿತು.

ADVERTISEMENT

ಮಾರಾಟಕ್ಕೆ ಅವಕಾಶವಿದ್ದರೂ ನಗರದಲ್ಲಿರುವ ಜ್ಯೂಸ್ ಅಂಗಡಿ, ಮಳಿಗೆಗಳು ಶುಕ್ರವಾರ ಪೂರ್ಣವಾಗಿ ತೆರೆದಿರಲಿಲ್ಲ. ಅಲ್ಲೋ ಇಲ್ಲೋ ಎಂಬಂತೆ ಒಂದೊಂದು ಮಳಿಗೆ ವ್ಯಾಪಾರ ಆರಂಭಿಸಿದವು. ಸಂಜೆವರೆಗೂ ತೆರೆದಿದ್ದ ಅಂಗಡಿಗಳಲ್ಲಿ ಬೆರಳೆಣಿಕೆಯಷ್ಟು ಗ್ರಾಹಕರು ಖರೀದಿಸಿದರು.

‘ಬೇಸಿಗೆ ರಜೆಗೆ ಮನೆಯಲ್ಲೇ ಇರುತ್ತಿದ್ದ ಮಕ್ಕಳು ಹಾಗೂ ಯುವಕರು ಐಸ್‍ಕ್ರೀಂ ಸವಿಯಲು ಬರುತ್ತಿದ್ದರು. ಅಂಗಡಿಯೊಳಗೆ ಕೂರಲು ಜಾಗವೂ ಇರುತ್ತಿರಲಿಲ್ಲ. ಬೇರೆ ಅವಧಿಗೆ ಹೋಲಿಸಿದರೆ ಜ್ಯೂಸ್ ಮತ್ತು ಐಸ್ ಕ್ರೀಂ ಬೇಸಿಗೆಯಲ್ಲಿ ಮಾತ್ರ ಹೆಚ್ಚು ವ್ಯಾಪಾರ ಆಗುತ್ತದೆ. ಕೊರೊನಾ ಲಾಕ್‍ಡೌನ್‍ನಿಂದ ತಿಂಗಳ ಹಿಂದೆ ವ್ಯಾಪಾರ ನಿಲ್ಲಿಸಲಾಯಿತು' ಎಂದು ರಾಜಾಜಿನಗರದ ಜ್ಯೂಸ್ ಕಾರ್ನರ್ ಅಂಗಡಿ ಮಾಲೀಕ ನಿಶಾಂತ್ ಹೇಳಿದರು.

‘ವ್ಯಾಪಾರಕ್ಕೆ ಅನುಮತಿ ನೀಡಿರುವುದು ಸಂತಸದ ವಿಚಾರ. ಆದರೆ, ಜನರಲ್ಲಿ ಕೊಳ್ಳುವ ಆಸಕ್ತಿಯಿಲ್ಲ. ಓಡಾಟಕ್ಕೆ ಅವಕಾಶವಿಲ್ಲದ ಕಾರಣ ಜನ ಮನೆಯಿಂದ ಹೊರಬರಲು ಹೆದರುತ್ತಾರೆ. ಇವುಗಳನ್ನು ದಾಟಿ ಐಸ್ ಕ್ರೀಂ, ಜ್ಯೂಸ್ ಖರೀದಿಗೆ ಹೇಗೆ ಬರುತ್ತಾರೆ? ಜನರೇ ಬಾರದ ಮೇಲೆ ವ್ಯಾಪಾರಕ್ಕೆ ಅವಕಾಶ ಇದ್ದರೇನು?‘ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

'ಜನರು ಬರುವ ನಿರೀಕ್ಷೆಯಿಂದ ಅಂಗಡಿ ಸ್ವಚ್ಛಗೊಳಿಸಿ ವ್ಯಾಪಾರ ಆರಂಭಿಸಿದೆ. ಆದರೆ, ಸಂಜೆವರೆಗೆ ಕೇವಲ ಐದು ಗ್ರಾಹಕರು ಐಸ್ ಕ್ರೀಂ ಖರೀದಿಸಿದರು. ಲಾಕ್‍ಡೌನ್‍ನಿಂದ ಬಹುತೇಕರು ಮನೆಯಲ್ಲೇ ನೆಚ್ಚಿನ ಜ್ಯೂಸ್ ತಯಾರಿಸಿ ಸವಿಯುತ್ತಾರೆ. ಇದರ ಬದಲು ಅಂಗಡಿ ಮುಚ್ಚುವುದೇ ಉತ್ತಮ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.