ಬೆಂಗಳೂರು: ಮನೆಯ ಬೀಗ ಒಡೆದು ನಗದು, ಚಿನ್ನಾಭರಣ ದೋಚುತ್ತಿರುವ ಹಾಗೂ ಮುಸುಕುಧಾರಿಗಳಾಗಿ ಬಂದು ಬಂದೂಕು, ಚಾಕು ತೋರಿಸಿ ಬೆದರಿಸಿ ದರೋಡೆ ನಡೆಸುತ್ತಿರುವ ಪ್ರಕರಣಗಳು ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಮನೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡವರೇ ನಡೆಸುತ್ತಿರುವ ಕಳ್ಳತನ ಪ್ರಕರಣಗಳು ನಗರದಲ್ಲಿ ಶೇ 20ರಷ್ಟು ಏರಿಕೆಯಾಗಿವೆ.
ಕಳ್ಳರ ಕೈಚಳಕವು ಮನೆಯ ಮಾಲೀಕರು ಹಾಗೂ ಬಾಡಿಗೆದಾರರಿಗೆ ಅಭದ್ರತೆ ಕಾಡುವಂತೆ ಮಾಡಿದೆ. ಅದರಲ್ಲೂ ಹೊರವಲಯದ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಶಾಲೆಗಳಿಗೆ ರಜೆಯಿದ್ದು, ಪ್ರವಾಸ ಹಾಗೂ ಊರಿಗೆ ತೆರಳುವವರ ಸಂಖ್ಯೆ ಹೆಚ್ಚು. ಇದೇ ಸಂದರ್ಭವನ್ನು ಬಳಸಿಕೊಂಡು ಕಳ್ಳರು ಕೃತ್ಯ ಎಸಗುವ ಸಾಧ್ಯತೆಯಿದೆ. ನಿವಾಸಿಗಳು ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ನಗರ ಪೊಲೀಸರು ಮನವಿ ಮಾಡಿದ್ದಾರೆ.
ಕಳೆದ 10 ದಿನಗಳಲ್ಲಿ ನಗರದ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚು ವರದಿ ಆಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ಕಳ್ಳರು ಹಗಲು ವೇಳೆ ಅಡ್ಡಾಡಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ, ರಾತ್ರಿ ವೇಳೆ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಪರಾರಿ ಆಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.
2023ರಲ್ಲಿ ರಾತ್ರಿ ವೇಳೆ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ 878 ಪ್ರಕರಣಗಳು ವರದಿ ಆಗಿದ್ದವು. 2024ರಲ್ಲಿ ಇದೇ ರೀತಿಯ 764 ಪ್ರಕರಣಗಳು ವರದಿ ಆಗಿದ್ದವು. ಈ ವರ್ಷ ಮೂರು ತಿಂಗಳಲ್ಲೇ 60 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಿತಿವಂತ ಕುಟುಂಬದವರು ಹಾಗೂ ಉದ್ಯೋಗಸ್ಥರು ಮನೆ ಕೆಲಸಕ್ಕೆ ಕಡಿಮೆ ಸಂಬಳಕ್ಕೆ ಹೊರ ರಾಜ್ಯದವರನ್ನೇ ಹೆಚ್ಚಾಗಿ ನೇಮಿಸಿಕೊಳ್ಳುತ್ತಾರೆ. ಅವರನ್ನು ನಂಬಿ ಮನೆಯ ಜವಾಬ್ದಾರಿ ಬಿಟ್ಟು ಹೋಗುತ್ತಿದ್ದಾರೆ. ಆ ಕೆಲಸಗಾರರೇ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆಗಳು ವರದಿಯಾಗಿವೆ.
ಮನೆ ಕೆಲಸಗಾರರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನ ನಡೆದಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಮನೆ ಕೆಲಸದವರಿಂದ 2023ರಲ್ಲಿ 320 ಹಾಗೂ 2024ರಲ್ಲಿ 382 ಕಳ್ಳತನ ಪ್ರಕರಣಗಳು ನಡೆದಿವೆ.
ಕಳ್ಳತನ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ದಕ್ಷಿಣ ವಿಭಾಗದ ಪೊಲೀಸರು ಜಾರಿಗೆ ತಂದಿರುವ ವಿನೂತನ ಕ್ರಮವು ಫಲ ನೀಡುತ್ತಿದೆ. ಶುಭ ಸಮಾರಂಭ, ಪ್ರವಾಸಕ್ಕೆ ತೆರಳುವಾಗ ದಕ್ಷಿಣ ವಿಭಾಗ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡಿದರೆ ಸಾಕು ಅವರೇ ಮನೆಯ ಮೇಲೆ ನಿಗಾ ಇಡುತ್ತಿದ್ದಾರೆ.
‘ಮನೆಗೆ ಬೀಗ ಹಾಕಿಕೊಂಡು ಎರಡು ಅಥವಾ ಮೂರು ದಿನಗಳು ಹೊರ ಹೋಗುವ ಸಂದರ್ಭದಲ್ಲಿ ದಕ್ಷಿಣ ವಿಭಾಗದ ನಿಯಂತ್ರಣ ಕೊಠಡಿ 080–22943111 ಅಥವಾ 9480801500ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಮನೆಯ ವಿಳಾಸ, ಫೋಟೊ ಹಾಗೂ ದೂರವಾಣಿ ಸಂಖ್ಯೆ ವಿವರ ನೀಡಬೇಕು. ಸ್ಥಳೀಯ ಪೊಲೀಸರಿಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿ ಮಾಹಿತಿ ನೀಡುತ್ತಾರೆ. ಗಸ್ತು ಸಿಬ್ಬಂದಿ ಬೀಗ ಹಾಕಿದ ಮನೆಗಳತ್ತ ನಿಗಾ ವಹಿಸಲಿದ್ದಾರೆ. ಈ ಕ್ರಮವು ಯಶಸ್ಸು ಕಂಡಿದೆ. ಇತರೆ ವಿಭಾಗಗಳಲ್ಲೂ ಜಾರಿಗೆ ತರುವ ಆಲೋಚನೆ ಇದೆ’ ಎಂದು ಮೂಲಗಳು ತಿಳಿಸಿವೆ.
ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಹಾಗೂ ಆಭರಣವನ್ನು ಸಣ್ಣ ಅಜಾಗರೂಕತೆಯಿಂದಾಗಿ ಕಳೆದುಕೊಳ್ಳುತ್ತಿದ್ದಾರೆ. ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಪೂರ್ವಾಪರ ವಿಚಾರಿಸಿಕೊಳ್ಳಬೇಕುಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ನಗರ ನಿವಾಸಿಗಳಿಗೆ ಸುರಕ್ಷತೆ ಒದಗಿಸಲು ಹಾಗೂ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ದಕ್ಷಿಣ ವಿಭಾಗದಲ್ಲಿ ಜಾರಿಗೆ ತಂದಿರುವ ವಿನೂತನ ಕ್ರಮವನ್ನು ನಾಗರಿಕರು ಬಳಸಿಕೊಳ್ಳಬೇಕುಲೋಕೇಶ್ ಬಿ. ಜಗಲಾಸರ್ ಡಿಸಿಪಿ ದಕ್ಷಿಣ ವಿಭಾಗ
ಹಲವು ಗ್ಯಾಂಗ್ ಸಕ್ರಿಯ
ನಗರದಲ್ಲಿ ಇರಾನಿ ನೇಪಾಳಿ ಓಜಿಕುಪ್ಪಂ ಹಾಗೂ ಬೆಡ್‌ಶೀಟ್ ಗ್ಯಾಂಗ್ ಸಕ್ರಿಯವಾಗಿವೆ. ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ತಂಡಗಳು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಕಳೆದ ವಾರ ತಲಘಟ್ಟಪುರ ಠಾಣೆಯ ಪೊಲೀಸರು ನೇಪಾಳಿ ಗ್ಯಾಂಗ್‌ನ ಐವರನ್ನು ಬಂಧಿಸಿದ್ದರು. ಹಗಲಿನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನೇಪಾಳದ ಐವರು ಆರೋಪಿಗಳು ರಾತ್ರಿ ವೇಳೆ ಹೊಂಚು ಹಾಕಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್ ಸದಸ್ಯರು ಜನರ ಗಮನ ಬೇರೆಡೆ ಸೆಳೆದು ಚಿನ್ನ ಹಾಗೂ ನಗದು ಕಳ್ಳತನ ಮಾಡುತ್ತಿದ್ದಾರೆ. ಈ ಗ್ಯಾಂಗ್ ಕೆ.ಆರ್.ಪುರ ಹಾಗೂ ಕೊತ್ತನೂರು ಭಾಗದಲ್ಲಿ ಸಕ್ರಿಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.