ADVERTISEMENT

‘ಟ್ರಾಮಾ ಸೆಂಟರ್‌’ಗೆ ಶೀಘ್ರವೇ ಅನುಮತಿ: ಸಚಿವ ಡಾ.ಕೆ.ಸುಧಾಕರ್

ನಿಮ್ಹಾನ್ಸ್‌ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ಕ್ರಮ:

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 20:16 IST
Last Updated 22 ಜುಲೈ 2022, 20:16 IST
ಮಿದುಳು ಆರೋಗ್ಯ ಕ್ಲಿನಿಕ್‌ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಭಿತ್ತಿಪತ್ರ ಬಿಡುಗಡೆ ಮಾಡಿದರು. ಟಿ.ಕೆ.ಅನಿಲ್‌ಕುಮಾರ್‌, ರಾಬಿನ್‌ ಉತ್ತಪ್ಪ, ಡಾ.ಪ್ರತಿಮಾ ಮೂರ್ತಿ ಮೊದಲಾದವರು ಹಾಜರಿದ್ದರು
ಮಿದುಳು ಆರೋಗ್ಯ ಕ್ಲಿನಿಕ್‌ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಭಿತ್ತಿಪತ್ರ ಬಿಡುಗಡೆ ಮಾಡಿದರು. ಟಿ.ಕೆ.ಅನಿಲ್‌ಕುಮಾರ್‌, ರಾಬಿನ್‌ ಉತ್ತಪ್ಪ, ಡಾ.ಪ್ರತಿಮಾ ಮೂರ್ತಿ ಮೊದಲಾದವರು ಹಾಜರಿದ್ದರು   

ಬೆಂಗಳೂರು: ‘ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಅವಲಂಬಿಸುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಈ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ಆವರಣದಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಆರಂಭಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಿಸಿರುವ ‘ಮಿದುಳು ಆರೋಗ್ಯ ಕ್ಲಿನಿಕ್‌’ ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

‘ದಕ್ಷಿಣ ಭಾರತದ ಎಲ್ಲ ರಾಜ್ಯಗಳ ರೋಗಿಗಳೂ ಚಿಕಿತ್ಸೆಗೆ ಇಲ್ಲಿಗೇ ಬರುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಹಾಸಿಗೆ ಲಭ್ಯವಿರುವುದಿಲ್ಲ ಎಂಬ ದೂರಿದೆ. ಟ್ರಾಮಾ ಕೇರ್‌ ಸೆಂಟರ್‌ ಆರಂಭಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರದ ಆರೋಗ್ಯ ಸಚಿವರಿಂದಲೂ ಅನುಮತಿಯ ಭರವಸೆ ಲಭಿಸಿದೆ’ ಎಂದರು.

ADVERTISEMENT

‘ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಅಗತ್ಯವಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನ ತಜ್ಞರು ಗ್ರಾಮೀಣ ಪ್ರದೇಶದ 100 ವೈದ್ಯರಿಗೆ ತರಬೇತಿ ನೀಡಿದ್ದು, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಇದರಿಂದ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ಪಡೆಯಬಹುದು’ ಎಂದರು.

ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ’ರಾಜ್ಯದ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿಯಂತ್ರಣಕ್ಕೆ ತರಬೇಕು‘ ಎಂದು ಆಗ್ರಹಿಸಿದರು.

ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ರಾಯಭಾರಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌, ನಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ, ಆರೋಗ್ಯ ಇಲಾಖೆ ನಿರ್ದೇಶಕಿ ಡಾ.ಎಂ.ಇಂದುಮತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.