ADVERTISEMENT

ಪಿ.ಜಿ.ಗಳಿಗೆ ಷರತ್ತುಬದ್ಧ ಅನುಮತಿ

ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ಯುವ ಜನತೆ ನಗರ ಪ್ರದೇಶಗಳಿಗೆ ವಾಪಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಸ್ನಾನದ ಕೋಣೆ, ಶೌಚಾಲಯದ ವ್ಯವಸ್ಥೆ ಸೇರಿದಂತೆ ವಿವಿಧ ಮುಂಜಾಗರೂಕ ಕ್ರಮಗಳೊಂದಿಗೆ ಸೇವೆ ನೀಡಬೇಕು ಎಂದು ಆರೋಗ್ಯ ಇಲಾಖೆಯುಪೇಯಿಂಗ್‌ ಗೆಸ್ಟ್‌ (ಪಿಜಿ) ಕಟ್ಟಡಗಳ ಮೇಲ್ವಿಚಾರಕರಿಗೆ ಸೂಚಿಸಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಬಹುತೇಕ ಪಿ.ಜಿಗಳು ಬಾಗಿಲು ಹಾಕಿದ್ದವು. ಕೆಲವರು ಇದಕ್ಕೂ ಮೊದಲೇ ನಗರ ತೊರೆದರೆ, ಇನ್ನೂ ಕೆಲವರು ಅನಿವಾರ್ಯವಾಗಿ ಊರುಗಳಿಗೆ ತೆರಳಿದ್ದರು. ಈಗಲಾಕ್‌ ಡೌನ್‌ ಸಡಿಲಿಸಿ, ಸಾರ್ವಜನಿಕ ಸಾರಿಗೆ ಪ್ರಾರಂಭಿಸಿರುವುದರಿಂದ ಕೆಲವರು ನಗರ ಪ್ರದೇಶಗಳಿಗೆ ವಾಪಸ್ ಬರುತ್ತಿದ್ದಾರೆ. ಎರಡೂವರೆ ತಿಂಗಳಿಂದ ಸೇವೆ ಸ್ಥಗಿತಗೊಳಿಸಿದ್ದ ಪಿ.ಜಿಗಳು ಬಾಗಿಲು ತೆರೆದು, ಬಂದವರಿಗೆ ವ್ಯವಸ್ಥೆ ಮಾಡಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪಿ.ಜಿ ಕಟ್ಟಡಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೊರೊನಾ ಸೋಂಕಿತ ವ್ಯಕ್ತಿ ಸೀನಿದಾಗ ಹಾಗೂ ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳಿಂದ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. ಅದರಲ್ಲೂ ಪೇಯಿಂಗ್‌ ಗೆಸ್ಟ್ ಕಟ್ಟಡ‌ಗಳಲ್ಲಿ ನೂರಾರು ಮಂದಿ ಆಶ್ರಯ ಪಡೆಯುವ ಜತೆಗೆ ಕೆಲವೆಡೆ ಒಂದೇ ಕೊಠಡಿಯಲ್ಲಿ ಹಲವರು ಇರುತ್ತಾರೆ. ಹಾಗಾಗಿ ಪರಸ್ಪರ ಅಂತರ, ನೆಲಗಳನ್ನು ಸೋಂಕು ನಿವಾರಕದ ಮೂಲಕ ಸ್ವಚ್ಛಗೊಳಿಸುವಿಕೆ, ಅನ್ಯರಿಗೆ ಪ್ರವೇಶ ನಿರ್ಬಂಧ ಸೇರಿದಂತೆ ವಿವಿಧ ಕ್ರಮಗಳೊಂದಿಗೆ ಸೇವೆ ನೀಡಲು ಇಲಾಖೆ ಸೂಚಿಸಿದೆ.

ADVERTISEMENT

ಹಾಸಿಗೆಗಳ ನಡುವೆ 2 ಮೀ. ಅಂತರ

* ಪ್ರತಿ ಕೊಠಡಿಗೂ ಹೊಂದಿಕೊಂಡು ಸ್ನಾನಗೃಹ ಹಾಗೂ ಶೌಚಾಲಯ ಕೊಠಡಿ ಇರಬೇಕು

* ಹಾಸಿಗೆಗಳ ನಡುವೆ ಕನಿಷ್ಠ ಎರಡು ಮೀಟರ್‌ಗಳ ಅಂತರ ಇರಬೇಕು

* ಪ್ರತಿನಿತ್ಯ ಕಟ್ಟಡದ ಹೊರಗೆ ಹಾಗೂ ಒಳಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ, ಸ್ವಚ್ಛಮಾಡಬೇಕು

* ಬಟ್ಟೆಗಳನ್ನು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು

* ಯಾವುದೇ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಬೇಕು

* ಸೋಂಕಿತ ವ್ಯಕ್ತಿ ಇದ್ದಲ್ಲಿ ಇಡೀ ಕಟ್ಟಡಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ, 24 ಗಂಟೆಯ ಬಳಿಕ ಪುನರಾರಂಭ ಮಾಡಲು ಅವಕಾಶ ನೀಡಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.