ADVERTISEMENT

ವಾರ್ಡ್‌ ವಿಂಗಡಣೆ ಕುರಿತ ತಕರಾರುಗಳಿಗೆ ಚುನಾವಣಾ ಆಯೋಗದ ಆಕ್ಷೇಪ

‘ವೈಯಕ್ತಿಕ ಹಿತಾಸಕ್ತಿ ವಿಜೃಂಭಣೆ’

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:23 IST
Last Updated 16 ಆಗಸ್ಟ್ 2022, 21:23 IST
   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಪುನರ್ ವಿಂಗಡಣೆ ವಿರೋಧಿಸಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತಲೂ ವೈಯಕ್ತಿಕ ಹಿತಾಸಕ್ತಿಯೇ ಢಾಳಾಗಿ ವಿಜೃಭಿಸುತ್ತಿದೆ’ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ.

ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಪ್ರಶ್ನಿಸಿ ಹೈಕೋರ್ಟ್‌ ವಕೀಲ ಎಸ್. ಇಸ್ಮಾಯಿಲ್ ಜಬೀವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಪಾಲಿಕೆ ಸದಸ್ಯರಾದ ಬಿ.ಎನ್. ಮಂಜುನಾಥ್ ರೆಡ್ಡಿ, ಎನ್. ನಾಗರಾಜ್ ಸೇರಿ ಒಟ್ಟು ಆರು ಜನರ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಿಟ್‌ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ಅಥವಾ ಮೌಖಿಕ ನಿರ್ದೇಶನ ನೀಡಲು ನಿರಾಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರ (ಆ.17) ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ADVERTISEMENT

ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ,‘ವಾರ್ಡ್‌ ವಿಂಗಡಣೆಯಲ್ಲಿ ಯಾವುದೇ ತರತಮ ಎಸಗಿಲ್ಲ. 2011ರ ಜನಗಣತಿ ಪ್ರಕಾರ ಮತ್ತು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಹದ್ದು ಮೀರಿ ಹೋಗದಂತೆಯೇ ಇದೇ ಮೊದಲ ಬಾರಿಗೆ ಈ ರೀತಿಯ ವಿಂಗಡಣೆ ಮಾಡಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಬಿಬಿಎಂಪಿ ಚುನಾಯಿತ ಆಡಳಿತದ ಅವಧಿ 2020ರ ಸೆಪ್ಟೆಂಬರ್‌ 14ರಂದೇ ಮುಗಿದಿದ್ದು, ತುರ್ತಾಗಿ ಚುನಾವಣೆ ನಡೆಸಬೇಕಿದೆ. ಅಂತೆಯೇ, ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಕಾಲಮಿತಿ ಕಡಿಮೆ ಇರುವುದರಿಂದ ಆಯೋಗಕ್ಕೆ ಅನಿವಾರ್ಯ ಸ್ಥಿತಿ ಎದುರಾಗಿದ್ದು, ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

‘ವಾರ್ಡ್‌ಗಳ ಪುನರ್‌ ವಿಂಗಡಣೆಯಲ್ಲಿ ಬಿಬಿಎಂಪಿ ಕಾಯ್ದೆಯ ಕಲಂ 7 (1)(ಎ) ಮತ್ತು (ಬಿ) ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಜನಸಂಖ್ಯೆಯನ್ನು ಸರಾಸರಿ 35 ಸಾವಿರದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗಿದೆ. ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಆದೇಶ ನೀಡಿದರೂ ಅದು ಚುನಾವಣೆಗೆ ಅಡ್ಡಿಯಾಗಲಿದೆ ಮತ್ತು ಆಯೋಗದ ಸಿದ್ಧತೆಗಳನ್ನು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ’ ಎಂದರು.

‘ಒಂದು ವೇಳೆ ಮೀಸಲಾತಿ ಅಧಿಸೂಚನೆ ಮೇಲೆ ಏನಾದರೂ ಮಧ್ಯಂತರ ಆದೇಶ ನೀಡಿದರೆ ಅದು, ಸುಪ್ರೀಂ ಕೋರ್ಟ್‌ ಜುಲೈ 28ರಂದು ನೀಡಿರುವ ಆದೇಶದ ಉಲ್ಲಂಘನೆ ಆಗಲಿದೆ’ ಎಂಬ ಅಂಶವನ್ನೂ ಫಣೀಂದ್ರ ನ್ಯಾಯಪೀಠದ ಗಮನಕ್ಕೆ ತಂದರು.

ಬಿಟಿಎಂ ಲೇಔಟ್‌ ನಿವಾಸಿಯಾದ ಕೆ.ಜಾರ್ಜ್‌ ಎಂಬುವರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್‌.ಪೊನ್ನಣ್ಣ, ‘ಸರ್ಕಾರ ವಾರ್ಡ್‌ ವಿಂಗಡಣೆಯಲ್ಲೇ ತನ್ನ ಕೈಚಳಕ ತೋರಿಸುವ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಹುನ್ನಾರ ನಡೆಸಿದೆ’ ಎಂದು ಆರೋಪಿಸಿದರು.

ಇದೇ ವೇಳೆ ರಾಜ್ಯ ಸರ್ಕಾರ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ‘ಅರ್ಜಿದಾರರು ಸಲ್ಲಿಸಿರುವ ದಾಖಲೆ-ಪುರಾವೆಗಳು ಕಾನೂನು ಮಾನ್ಯತೆ ಹೊಂದಿಲ್ಲ. ಆದ್ದರಿಂದ, ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು’ ಎಂದು ಮನವಿ ಮಾಡಿದೆ.

‘ಸರ್ಕಾರಕ್ಕೆ ಚುನಾವಣೆ ಬೇಡವಾಗಿದೆ’
‘ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಚುನಾವಣೆ ಬೇಡವಾಗಿದೆ’ ಎಂದು ಇದೇ ವೇಳೆ ಹಿರಿಯ ವಕೀಲ ಎಚ್‌.ಎನ್.ಶಶಿಧರ ಅವರು ಆರೋಪಿಸಿದರು.

ಗಾಂಧಿನಗರದ ನಿವಾಸಿ ಸಿ.ಎಸ್.ರಘು ಎಂಬ ಮಧ್ಯಂತರ ಅರ್ಜಿದಾರರ ಪರ ವಾದ ಮಂಡಿಸಿದ ಶಶಿಧರ ಅವರು, ‘ಈ ಹಂತದಲ್ಲಿ ಚುನಾವಣೆ ಪ್ರಕ್ರಿಯೆಗೆ ತಡೆ ಒಡ್ಡುವುದು ಸಲ್ಲದು. ಬಿಬಿಎಂಪಿಯಲ್ಲಿ ಚುನಾಯಿತ ಆಡಳಿತ ಬರಬೇಕಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ತಕರಾರುಗಳಿಗೆ ಕೊನೆ ಎಂಬುದೇ ಇರುವುದಿಲ್ಲ. ಆದ್ದರಿಂದ ನ್ಯಾಯಪೀಠ ಚುನಾವಣೆ ನಡೆಯಲು ಸಮ್ಮತಿ ನೀಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.